Advertisement

ಗಡಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ

02:28 PM Mar 27, 2022 | Team Udayavani |

ಬೆಳಗಾವಿ: ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಪರೀಕ್ಷೆ ಇಲ್ಲದೇ ಪಾಸಾಗಿದ್ದ ವಿದ್ಯಾರ್ಥಿಗಳು ಜೀವನದ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಮಾ. 28ರಿಂದ ಏ. 11ರ ವರೆಗೆ ನಡೆಯಲಿರುವ ಪರೀಕ್ಷೆಗೆ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ಶೆ„ಕ್ಷಣಿಕ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

Advertisement

2020 ಹಾಗೂ 2021ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರೂ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಈ ಬಾರಿ ಕೋವಿಡ್‌-19 ಸೋಂಕು ಪ್ರಮಾಣ ಕಡಿಮೆ ಆಗಿದ್ದರಿಂದ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಲಾಗಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಏಳು ವಲಯಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 493 ಪ್ರೌಢಶಾಲೆಗಳ 17,118 ಬಾಲಕರು ಹಾಗೂ 16,689 ಬಾಲಕಿಯರು ಸೇರಿದಂತೆ 33,807 ವಿದ್ಯಾರ್ಥಿಗಳಿಗೆ ಪರೀಕ್ಷಾ ಗುರುತಿನ ಚೀಟಿಗಳನ್ನು ತಲುಪಿಸಲಾಗಿದೆ. 139 ಪರೀಕ್ಷಾ ಕೇಂದ್ರಗಳ 1733 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಅಕ್ರಮ ತಡೆಯಲು ಕ್ರಮ: ಪರೀಕ್ಷೆಯ ವೇಳೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲು ತಂಡಗಳನ್ನು ರಚಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ಪೊಲೀಸ್‌ ಬಿಗಿ ಪಹರೆ ಹಾಕಲಾಗಿದೆ. 144 ಕಲಂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಕ್ರಮ ತಡೆಯಲು ಇಲಾಖೆಯಿಂದ ಅಧಿಕಾರಿಗಳ ತಂಡಗಳನ್ನು ಮಾಡಿಕೊಳ್ಳಲಾಗಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 139 ಮುಖ್ಯ ಸೂಪರಿಡೆಂಟ್‌ಗಳು, 12 ಉಪ ಮುಖ್ಯ ಸೂಪರಿಡೆಂಟ್‌ಗಳು, 139 ಕಸ್ಟೋಡಿಯನ್‌ಗಳು, 139 ಮೊಬೈಲ್‌ ಸ್ವಾಧೀನಾಧಿಕಾರಿಗಳು, 21 ತಾಲೂಕು ಜಾಗೃತ ದಳ, 139 ಸ್ಥಾನಿಕ ಜಾಗೃತ ದಳ, 20 ಮಾರ್ಗಾಧಿಕಾರಿಗಳು, 278 ಆರೋಗ್ಯ ಸಿಬ್ಬಂದಿ, 278 ಪೊಲೀಸರು, 2235 ಕೊಠಡಿ ಮೇಲ್ವಿಚಾರಕರು ಸೇರಿದಂತೆ ಒಟ್ಟು 5302 ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ.

Advertisement

ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರದ ನಿರ್ದೇಶನದಂತೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೋವಿಡ್‌ ಸೋಂಕು ಕಡಿಮೆಯಾದರೂ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸೂಚಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಬರೆಯುತ್ತಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆ ಸಿದ್ಧತೆ ಮಾಡಿಟ್ಟುಕೊಂಡಿದೆ.

ಮನೋಸ್ಥೈರ್ಯ ತುಂಬಿದ ಇಲಾಖೆ: ಕೋವಿಡ್‌ದಿಂದ ಹೊರಗೆ ಬಂದಿರುವ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಲಾಗಿದೆ. ಪರೀಕ್ಷೆ ಬರೆಯುವಾಗ ಅಡಚಣೆ ಆಗದಂತೆ ಸಿದ್ಧತೆ ಮಾಡಲಾಗಿದೆ. ಕೋವಿಡ್‌ ಕಾರಣದಿಂದ ತರಗತಿಗಳು ನಡೆಯದಿದ್ದಕ್ಕೆ ಶೇ. 30ರಷ್ಟು ಪಠ್ಯವನ್ನು ಕಡಿತಗೊಳಿಸಲಾಗಿದೆ. ಪರೀಕ್ಷಾ ಕೇಂದ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿದ್ದ ಗೊಂದಲ ನಿವಾರಿಸಲಾಗಿದೆ. ಪ್ರತಿ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿನ ಮುಖ್ಯಶಿಕ್ಷಕರ ಸಭೆ ನಡೆಸಿ ಸಲಹೆ-ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿದರು.

ಜಿಲ್ಲೆಗೆ ಪ್ರಶ್ನೆ ಪತ್ರಿಕೆಗಳು ತಲುಪಿವೆ. ಪರೀಕ್ಷಾ ಅಕ್ರಮ ನಡೆಯದಂತೆ ತಯಾರಿ ಮಾಡಲಾಗಿದೆ. ಪರೀಕ್ಷಾ ದಿನದಂದು ವಿದ್ಯುತ್‌ ಸಂಪರ್ಕ ಕಡಿತ ಆಗದಂತೆ ಹೆಸ್ಕಾಂ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ.

ಪ್ರಶ್ನೆ ಪತ್ರಿಕೆಗಳನ್ನು ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಸೀಲ್‌ ಮಾಡುವಾಗ ಮುಖ್ಯ ಸೂಪರಿಂಟೆಂಡೆಂಟ್‌ ಕೊಠಡಿಯಲ್ಲಿ ಹಾಗೂ ಪರೀಕ್ಷಾ ಕೇಂದ್ರದ ಕಾರಿಡಾರ್‌ನಲ್ಲಿ 4 ಕಡೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ಬರೆಯಲು ಬರುವ ಎಲ್ಲ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ತೋರಿಸಿ ವಾಕರಸಾ ಸಂಸ್ಥೆಯ ಎಲ್ಲ ಬಸ್‌ಗಳಲ್ಲಿ ಪರೀಕ್ಷಾ ದಿನದಂದು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಈಗಾಗಲೇ ಪೂರಕ ಮತ್ತು ಸರಣಿ ಪರೀಕ್ಷೆಗಳನ್ನು ನಡೆಸಿ, ವಿಶೇಷ ಕ್ರಿಯಾಯೋಜನೆ ರೂಪಿಸಿ, ತರಗತಿಗಳನ್ನು ನಡೆಸಿ ಮಾರ್ಗದರ್ಶನ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಶಿಕ್ಷಕರು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಪಾಠ ಹೇಳಿದ್ದಾರೆ.

 

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾ. 28ರಿಂದ ಏ. 11ರ ವರೆಗೆ ಪರೀಕ್ಷೆ ನಡೆಯಲಿದ್ದು, ಯಾವುದೇ ಗೊಂದಲ ಆಗದಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿದೆ. ಅಕ್ರಮ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

-ಬಸವರಾಜ ನಾಲತವಾಡ, ಡಿಡಿಪಿಐ, ಬೆಳಗಾವಿ

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next