ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಸೋಮವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 2.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಶಿರಮಗೊಂಡನಹಳ್ಳಿ, ಬಿಸಲೇರಿ, ನಾಗನೂರು, ಹದಡಿ, ಕುಕ್ಕವಾಡ ಮತ್ತು ಬಲ್ಲೂರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 10-11 ವರ್ಷದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಈಗ 2.5 ಕೋಟಿ ರೂ. ಅನುದಾನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸ್ಥಳೀಯರು ಕಾಮಗಾರಿಗಳು ಗುಣಮಟ್ಟದಿಂದ ಕೂಡಿವೆ ಎಂಬುದನ್ನು ಪರಿಶೀಲಿಸಬೇಕು. ಕಳಪೆ ಎಂದು ಕಂಡುಬಂದರೆ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಶಿರಮಗೊಂಡನಹಳ್ಳಿಯಲ್ಲಿ 55 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಒಳಚರಂಡಿ, ನಾಗನೂರುನಲ್ಲಿ 10 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ, ಬಿಸಲೇರಿಯಲ್ಲಿ 21 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ, ಹದಡಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ 80 ಲಕ್ಷ, ಕುಕ್ಕವಾಡದಲ್ಲಿ 18 ಲಕ್ಷ ವೆಚ್ಚದಲ್ಲಿ ಸಿ.ಸಿ. ಚರಂಡಿ ಹಾಗೂ ಬಲ್ಲೂರು ಗ್ರಾಮ ಮತ್ತು ಕ್ಯಾಂಪ್‌ಗ್ಳಲ್ಲಿ ಒಟ್ಟು 22 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರ ಇನ್ನಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಜಿ.ಸಿ. ನಿಂಗಪ್ಪ ಮಾತನಾಡಿ, ಶಾಸಕ ಶಾಮನೂರು ಶಿವಶಂಕರಪ್ಪನವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಬಡವರ ಮೇಲೆ ಅಪಾರ ಕಳಕಳಿ ಇರುವ ಕಾರಣಕ್ಕಾಗಿಯೇ ಗ್ರಾಮೀಣ ಭಾಗದಲ್ಲಿ ಬಡವರ ಪರ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್. ಓಬಳೇಶಪ್ಪ, ದಾವಣಗೆರೆ ಎಪಿಎಂಸಿ ಅಧ್ಯಕ್ಷ ಬಿ.ಕೆ. ಈರಣ್ಣ, ನಿರ್ದೇಶಕ ಎಂ.ಬಿ. ಹಾಲಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಮಂಜಣ್ಣ, ಲಕ್ಷ್ಮಿದೇವಿ ಪ್ರಕಾಶ್, ಹದಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ ಹಾಲಪ್ಪ, ಉಪಾಧ್ಯಕ್ಷೆ ಲಲಿತಮ್ಮ ಮಹಾಂತೇಶ್, ಸದಸ್ಯರಾದ ಹದಡಿ ರವಿ, ಮಲ್ಲೇಶಪ್ಪ, ಬಸವನಗೌಡ್ರು, ಕುಕ್ಕವಾಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಶೋಧಮ್ಮ, ಮುಖಂಡರಾದ ಶಿರಮಗೊಂಡನಹಳ್ಳಿ ರುದ್ರೇಶ್, ಲಿಂಗೇಶ್, ಸುರೇಶ್ ನಾಗರಸನಹಳ್ಳಿ, ಅಂಜಿನಪ್ಪ, ನಾಗವೇಣಿ ವಿಜಯ್‌ಕುಮಾರ್, ಚಂದ್ರಪ್ಪ, ಮಾಲತೇಶ್, ಎ.ಕೆ. ನೀಲಪ್ಪ, ವೀಣಾ ವಿಜಯ್ ಕುಮಾರ್, ಬಸವರಾಜಪ್ಪ, ಎಲ್. ಬಸವರಾಜ್, ಕಬ್ಬೇರ್ ಜಯಪ್ಪ, ಗುಡ್ಡಪ್ಪ, ಇಂಡಿ ಉಜ್ಜಪ್ಪ, ಎ.ಕೆ. ಚಂದ್ರಪ್ಪ, ಮಲ್ಲಿಕಾರ್ಜುನ್ ಇತರರು ಇದ್ದರು.