“ಎಲ್ಲಿದ್ದೆ ಇಲ್ಲೀ ತಂಕ, ಎಲ್ಲಿಂದ ಬಂದೆವ್ವಾ.. ನಿನ್ನ ಕಂಡು ನಾನ್ಯಾಕೆ ಕರಗಿದೆನು…’ “ಪರಸಂಗದ ಗೆಂಡೆತಿಮ್ಮ’ ಚಿತ್ರದ ಈ ಹಾಡು ಇಂದಿಗೂ ಎವರ್‌ಗ್ರೀನ್. ಈ ಹಾಡು ಕೇಳಿದರೆ, ನಟ ಲೋಕೇಶ್ ನೆನಪಾಗುತ್ತಾರೆ. ಲೋಕೇಶ್ ನೆನಪಾದರೆ, ಈ ಹಾಡು ಗುನುಗುವಂತಾಗುತ್ತೆ. ಅಷ್ಟರ ಮಟ್ಟಿಗೆ ಈ ಹಾಡು ಮತ್ತು ಲೋಕೇಶ್ ಜನಮಾನಸದಲ್ಲಿ ಬೆರೆತಾಗಿದೆ. ಅಷ್ಟಕ್ಕೂ ಈಗ ಯಾಕೆ ಈ ಹಾಡಿನ ಬಗ್ಗೆ ಪೀಠಿಕೆ ಎಂಬ ಪ್ರಶ್ನೆ ಎದುರಾಗಬಹುದು.
ಲೋಕೇಶ್ ಪುತ್ರ ಸೃಜನ್ ಲೋಕೇಶ್ ಈಗ ಹೊಸದೊಂದು ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಹೀರೋ ಅವರೇ, ನಿರ್ಮಾಣವೂ ಅವರದೇ. ಆ ಚಿತ್ರಕ್ಕೆ “ಎಲ್ಲಿದ್ದೆ ಇಲ್ಲೀ ತನಕ’ ಎಂಬ ಶೀರ್ಷಿಕೆ ಇಟ್ಟಿದ್ದಾರೆ. “ಪರಸಂಗದ ಗೆಂಡೆತಿಮ್ಮ’ ಚಿತ್ರದ ಹಾಡಿನ ಸಾಲೇ ಚಿತ್ರದ ಶೀರ್ಷಿಕೆಯಾಗಿರುವುದರಲ್ಲಿ ವಿಶೇಷವಿದೆ. ಲೋಕೇಶ್ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ತಯಾರಾಗುತ್ತಿರುವುದು ಒಂದಾದರೆ, ಸೃಜನ್ ಹೀರೋ ಆಗಿರುವುದು ಇನ್ನೊಂದು.
ಹಾಗಾಗಿ ಚಿತ್ರಕ್ಕೆ ಅದೇ ಶೀರ್ಷಿಕೆ ಪಕ್ಕಾ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆಗೆ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನ ಮೊದಲ ಚಿತ್ರವಿದು. ಇನ್ನು, ಈ ಚಿತ್ರವನ್ನು ತೇಜಸ್ವಿ ನಿರ್ದೇಶಿಸುತ್ತಿದ್ದಾರೆ. “ಮಜಾ ಟಾಕೀಸ್’ ರಿಯಾಲಿಟಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋ ನಿರ್ದೇಶನದ ಹೊಣೆ ಹೊತ್ತಿರುವ ತೇಜಸ್ವಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ.
ಇನ್ನು, “ಮಜಾ ಟಾಕೀಸ್’ ತಂಡದ ಅರುಣ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಕೇಶ್ ಮಾತುಗಳನ್ನು ಪೋಣಿಸಿದ್ದಾರೆ. “ಎಲ್ಲಿದ್ದೆ ಇಲ್ಲೀ ತನಕ’ ಚಿತ್ರದ ಶೀರ್ಷಿಕೆ ಕೇಳಿದರೆ ಇದೊಂದು ಮಜವಾದ ಸಿನಿಮಾ ಇರಬಹುದಾ ಎಂದೆನಿಸಬಹುದು. ಹೌದು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಇರುವಂತಹ ಚಿತ್ರ. ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿ ಚಿತ್ರೀಕರಿಸಲು ತಂಡ ಸಜ್ಜಾಗಿದೆ. ಪ್ರೀತಿಗಾಗಿ ಒಬ್ಬ ಹುಡುಗ ಏನೆಲ್ಲಾ ಹರಸಾಹಸ ಮಾಡುತ್ತಾನೆ ಎಂಬ ಒನ್‌ಲೈನ್ ಸ್ಟೋರಿಯನ್ನಿಟ್ಟುಕೊಂಡು ಕಥೆ ಮಾಡಲಾಗಿದೆ. ಇಲ್ಲಿ ಭರ್ಜರಿ ನಾಲ್ಕು ಫೈಟ್ಸ್ ಇವೆ.
ಮನರಂಜನೆ ಜೊತೆಗೊಂದು ಹೊಸ ಅಂಶಗಳು ಇಲ್ಲಿ ಕಾಣಸಿಗಲಿವೆ ಎಂಬುದು ಚಿತ್ರತಂಡದ ಹೇಳಿಕೆ. ಚಿತ್ರದಲ್ಲಿ ಯಶಸ್ ಸೂರ್ಯ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ರಾಧಿಕಾ ರಾವ್, ತಾರಾ, ಅವಿನಾಶ್, ಸಾಧುಕೋಕಿಲ, ತಬಲಾನಾಣಿ, ಗಿರಿ ಇತರೆ ಕಲಾವಿದರ ದಂಡು ಚಿತ್ರದಲ್ಲಿರಲಿದೆ. ಸುಮಾರು 45 ದಿನಗಳ ಕಾಲ ಬೆಂಗಳೂರು, ಮೈಸೂರು ಮತ್ತು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಡಿ.9 ರಂದು ಮುಹೂರ್ತ ನಡೆಯಲಿದ್ದು, ಡಿ.10 ರಿಂದ ಚಿತ್ರೀಕರಣ ಶುರುವಾಗಲಿದೆ. ಅರ್ಜುನ್ ಜನ್ಯ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ವೇಣು ಛಾಯಾಗ್ರಹವಿದೆ.