Advertisement

ಅಪಾಯ ಸೃಷ್ಟಿಸುತ್ತಿವೆ ರಸ್ತೆ ಬದಿಯ ಮರಗಳು

02:51 PM Mar 10, 2017 | |

ಕಾರ್ಕಳ: ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯ ಪಕ್ಕದ ಕಂಪೌಂಡಿನಲ್ಲಿರುವ  ಕೆಲವೊಂದು ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು  ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ಜೀವ ಕೈಯಲ್ಲಿ ಹಿಡಿದು ಹೋಗುವಂತೆ ಮಾಡುತ್ತಿವೆ. ಸಾಮಾನ್ಯವಾಗಿ  ರಸ್ತೆಯ ಪಕ್ಕದಲ್ಲಿಯೇ ಇರುವ ಕೆಲವೊಂದು ಖಾಸಗಿ ತೋಟಗಳ ಮರಗಳು ರಸ್ತೆಯತ್ತ ಬಾಗಿ ಇನ್ನೇನು ತಲೆ ಮೇಲೆ ಉದುರಿ ಬೀಳುತ್ತವೆನೋ ಎನ್ನುವಂತೆ ಕಂಡು ಸಾರ್ವಜನಿಕರನ್ನು ಹೌಹಾರುವಂತೆ ಮಾಡಿಬಿಡುತ್ತಿದೆ.ಅಲ್ಲದೇ ಇವುಗಳ ಪೈಕಿ ತೆಂಗಿನ ಮರಗಳೇ ಹೆಚ್ಚಿರುವುದರಿಂದ ಒಣಗಿದ ತೆಂಗಿನ ಕಾಯಿಗಳು ಆಗಾಗ ರಸ್ತೆಯ ಮೇಲೆ ಬಿದ್ದು, ತೆಂಗಿನ ಮಡಲುಗಳು ಕೆಲವೊಮ್ಮೆ ಸಾರ್ವಜನಿಕರ ಮೈ ಮೇಲೆ ಬಿದ್ದ ಪ್ರಸಂಗಗಳೂ ನಡೆದಿವೆ.

Advertisement

ಶಾಲಾ ವಠಾರದಲ್ಲಿ ಅಪಾಯಕಾರಿ ಮರಗಳು
ನಗರದ ಆನೆಕೆರೆ ಬಳಿಯ ರಸ್ತೆ ಬದಿಗಳಲ್ಲಿ, ಕ್ರೈಸ್ಟ್‌ಕಿಂಗ್‌ ಚರ್ಚ್‌ ಆವರಣಗಳಲ್ಲಿರುವ ರಸ್ತೆ ಬದಿಗಳಲ್ಲಿ  ಹೆಚ್ಚಾಗಿ ಇಂತಹ ಮರಗಳು ರಸ್ತೆಯತ್ತ ವ್ಯಾಪಿಸಿ ಭಯ ಹುಟ್ಟಿಸುತ್ತಿವೆ.ಮುಖ್ಯವಾಗಿ ನೂರಾರು ಮಕ್ಕಳು ಹಾದು ಹೋಗುವ ಶಾಲಾ ವಠಾರದಲ್ಲಿಯೇ ಇಂತಹ ಮರಗಳಿರುವುದು ಮತ್ತೂ ಅಪಾಯಕಾರಿ. ಪುಟ್ಟ ಮಕ್ಕಳು ನಡೆದುಕೊಂಡು ಹೋಗುವಾಗ ಸ್ವಲ್ಪ ದೂರದಲ್ಲಿಯೇ ತೆಂಗಿನ ಮಡಲು ಹಾಗೂ ತೆಂಗಿನಕಾಯಿಗಳೂ ಬಿದ್ದು ಅವರನ್ನು ಕಂಗಾಲು ಮಾಡಿಬಿಡುತ್ತಿರುವ ಪ್ರಸಂಗಗಳೂ ಅಲ್ಲಲ್ಲಿ ನಡೆಯುತ್ತಿವೆ.ಬೈಕ್‌ ಸವಾರರೂ ಈ ತೊಂದರೆ ಅನುಭವಿಸಿದ್ದಾರೆ.

ಖಾಸಗಿ ತೋಟಗಳಲ್ಲಿರುವ ಮರಗಳಲ್ಲಿ ತೆಂಗಿನ ಕಾಯಿಗಳು ನೇತಾಡುತ್ತಿದ್ದರೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಖಾಸಗಿ ಮನೆಯವರು ಮರಗಳಲ್ಲಿನ ತೆಂಗಿನಕಾಯಿಗಳನ್ನು ಕೀಳದೇ ಇರುವುದು,ಹಾಗೂ  ಮಳೆಗಾಲಕ್ಕೂ ಈ ಪರಿಸ್ಥಿತಿ ಮುಂದುವರಿಯುತ್ತಿರುವುದು ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ.

ಪುರಸಭೆಗೂ ಕುರುಡೇ?
ಹಿಂದೆಲ್ಲಾ ರಸ್ತೆ ಬದಿ ಮರಗಳನ್ನು ಹೊಂದಿದ ಖಾಸಗಿಯವರನ್ನು ತೆಂಗಿನ ಕಾಯಿ ಕೀಳುವಂತೆ, ಸಾರ್ವಜನಿಕರಿಗೆ ಮರದಿಂದ ಯಾವುದೇ ತೊಂದರೆಯಾಗದಂತೆ ಎಚ್ಚರಿಸುತ್ತಿದ್ದ ಪುರಸಭೆ ಇದೀಗ ಈ ಕುರಿತು ಯಾವುದೇ ಕಾಳಜಿ ವಹಿಸುತ್ತಿಲ್ಲ. ವಿದ್ಯುತ್‌ ಕಂಬದ ಮೇಲೆ ಮಡಲುಗಳು ಬಿದ್ದು ನೇತಾಡುವ ಹಂತದಲ್ಲಿದ್ದರೂ ಪುರಸಭೆ ಅದರ ಸೂಕ್ತ ವಿಲೇವಾರಿ ಮಾಡಿಸದೇ ಕುರುಡಾಗಿದೆ.ಅಪಾಯಕಾರಿ ಹಂತದಲ್ಲಿರುವ ಈ ಮರಗಳನ್ನು ಕ‌ಡಿಯುವಂತೆ ಅಥವಾ ಆಗಾಗ ಅದರ ಕಾಯಿಗಳನ್ನು ಕೀಳುವಂತೆ ಪುರಸಭೆ ಸಂಬಂಧಪಟ್ಟವರಿಗೆ ತಾಕೀತು ಮಾಡಿದರೆ  ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.ಅಲ್ಲದೇ ತಮ್ಮ ಜಾಗದಲ್ಲಿರುವ ಮರಗಳು ರಸ್ತೆ ಬದಿಯಿದ್ದಲ್ಲಿ  ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳ ಕಾಯಿ,ಮಡಲು ಹಾಗೂ ಗೆಲ್ಲುಗಳನ್ನು ಆಗಾಗ ಕಿತ್ತು ಸೂಕ್ತ ವಿಲೇವಾರಿ ಮಾಡಿ ಅನಾಹುತಗಳನ್ನು ತಪ್ಪಿಸುವಲ್ಲಿ ಸಂಬಂಧಪಟ್ಟವರಲ್ಲಿ ಸ್ವ ಅರಿವು ಮೂಡಬೇಕಿದೆ.ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು, ಮುಖ್ಯವಾಗಿ ತೆಂಗಿನಮರಗಳನ್ನು ಸೂಕ್ತ ವಿಲೇವಾರಿ ಮಾಡದೇ ಇದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ.

ಮರಗಳನ್ನು ವಿಲೇವಾರಿ ಮಾಡುವುದು ಮನೆಯವರ ಜವಾಬ್ದಾರಿ
ಕೆಲವೊಂದು ಮನೆಯವರು ಊರಲ್ಲಿ ನೆಲೆಸಿರದೇ ಇರುವುದರಿಂದ ಮರಗಳನ್ನು ವಿಲೇವಾರಿ ಮಾಡುವವರು ಇರದೇ ಈ ಸಮಸ್ಯೆ ಸೃಷ್ಟಿಯಾಗಿರಬಹುದು.ಮರಗಳನ್ನು  ಆಗಾಗ ಗಮನಿಸಿ ರಸ್ತೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರಿಗೆ ಅದರಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಜವಾಬ್ದಾರಿ. ಪುರಸಭೆ ಮನೆಯವರಿಗೆ ನೋಟಿಸ್‌ ಕೊಡಬಹುದು ಹಾಗೂ ಎಚ್ಚರಿಕೆ ನೀಡಬಹುದು.ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ಮೇಬಲ್‌ ಡಿ’ಸೋಜಾ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next