ಶ್ರೀರಂಗಪಟ್ಟಣ: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳಾದ ಟಿಪ್ಪು ಬೇಸಿಗೆ ಅರಮನೆ, ದರಿಯಾ ದೌಲತ್ ಮತ್ತು ಟಿಪ್ಪು ಸಮಾಧಿ ಸ್ಥಳ, ಗುಂಬಸ್‌ಗೆ ಮಾ.16 ರಿಂದ 20ರ ವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಎಂ.ವಿ.ರೂಪಾ ತಿಳಿಸಿದರು.
ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್ ಹಾಗೂ ರಂಗನತಿಟ್ಟು ಪಕ್ಷಿಧಾಮದ ಪ್ರವೇಶಕ್ಕೆ ನಿರ್ಬಂಧ ಹೇರಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ಬಳಿ ಕಂದಾಯ ಇಲಾಖೆ ಸಿಬ್ಬಂದಿ ಪ್ರವಾಸಿಗರಿಗೂ ಅರಿವು ಮೂಡಿಸುವ ಸಂಬಂಧ ಜಾಗೃತಿ ಕಾರ್ಯ ನಡೆಸಿ ಸ್ಥಳ ಪರಿಶೀಲನೆ ಮಾಡಿ ಪ್ರವಾಸಿ ತಾಣಗಳ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ದೇಶ ವಿದೇಶದಿಂದ ಶ್ರೀರಂಗಪಟ್ಟಣ ಪ್ರವಾ ಸಿಕ್ಕೆ ಪ್ರವಾಸಿಗರು ಹೆಚ್ಚಿನ ರೀತಿಯಲ್ಲಿ ಪ್ರತಿನಿತ್ಯ ಆಗಮಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳ ಪ್ರವೇಶ ನಿಷೇಧಿಸಿದರೆ ಪ್ರವಾಸಿಗರ ಸಂಖ್ಯೆ ಇಳಿಮುಖ ವಾಗಲಿದ್ದು ಇದರಿಂದ ಕೊರೊನಾ ವೈರಸ್ ತಡೆ ಗಟ್ಟಲು ಸಹಕಾರವಾದಂತಾಗುತ್ತದೆ ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ 1ರಿಂದ 9 ನೇ ತರಗತಿ ಶಾಲಾ ಮಕ್ಕಳಿಗೆ ರಜೆ ಘೋಷಿಸಿ ಮನೆಯಿಂದ ಮಕ್ಕಳು ಹೊರ ಬರದಂತೆ ಎಚ್ಚರ ವಹಿಸಲು ಪೋಷಕರಿಗೂ ಮಾಹಿತಿ ನೀಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಜನರು ಗುಂಪು ಗುಂಪಾಗಿ ಸೇರಬಾರದೆಂದು ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ಮಾಲ್‌ಗಳು, ನೈಟ್ ಕ್ಲಬ್, ಸ್ವಿಮ್ಮಿಂಗ್‌ಪೂಲ್ ಹಾಗೂ ಸಮಾರಂಭ ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.