ಮಾಗಡಿ: 1,100 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮಾಗಡಿ ಚತುಷ್ಪಥ ಮತ್ತು ಹೇಮಾವತಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಧನಂಜಯ ರುದ್ರೇಶ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ಬಳಿ ನಿಯೋಗ ತೆರಳಿ ಮನವಿ ಮಾಡಿ ಚರ್ಚಿಸಲಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪೂರ್ಣಗೊಂಡಿದ್ದು, ಬೇಗ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಡಿಸಿಎಂ ಬಹಳ ಆಸಕ್ತಿ ವಹಿಸಲಾಗಿದೆ ಎಂದಿದ್ದಾರೆ ಎಂದು ತಿಳಿಸಿದರು.
86 ಕೆರೆ ತುಂಬಿಸುವ ಯೋಜನೆ: ವೀರಪ್ಪ ಮೊಯ್ಲಿ ಮಖ್ಯಮಂತ್ರಿಯಾಗಿದ್ದಾಗ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ಎಚ್.ಎಂ.ರೇವಣ್ಣ ಅವರು ಪ್ರಸ್ತಾವನೆ ಸಲ್ಲಿಸಿ, ಮಾಗಡಿಗೆ ಹೇಮಾವತಿ ಹರಿಸಲು ಶ್ರೀರಂಗ ಏತ ನೀರಾವರಿ ಯೋಜನೆ ರೂಪಿಸಿದರು. ಯೋಜನೆ ಅನುಸಾರ ತುಮಕೂರು ಶಾಖಾ ನಾಲೆ 190 ಕಿ.ಮೀ. ಅಂತರದಿಂದ ಏತ ನೀರಾವರಿ ಮೂಲಕ ತಾಲೂಕಿನ 86 ಕೆರೆಗಳಿಗೆ ನೀರು ತುಂಬಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕನಿಷ್ಠ 0.9 ಟಿಎಂಸಿ ನೀರು ಅವಶ್ಯ ಯೋಜನೆ ರೂಪಗೊಂಡಿದ್ದು, ಸುಮಾರು 190 ಕಿ.ಮೀ. ದೂರದಿಂದ 131 ಕ್ಯೂಸೆಕ್ ನೀರನ್ನು 120 ಮೀ. ಎತ್ತರಕ್ಕೆ ಲಿಫ್ಟ್ ಮಾಡಬೇಕಿದೆ.
ಯೋಜನೆ ಅನುಕೂಲತೆ: ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನೀರಾವರಿ ಯೋಜನೆಗೆ ಶ್ರೀರಂಗ ಏತ ನೀರಾವರಿ ಯೋಜನೆ ಎಂಬ ಹೆಸರಿಡಲಾಗಿತ್ತು. ಯೋಜನೆ ಅನುಷ್ಠಾನ ದಿಂದ ಮಾಗಡಿ ತಾಲೂಕಿನ 86 ಕೆರೆಗಳಿಗೆ ನೀರು ಹರಿಸುವುದು. ಅಂತರ್ಜಲ ಹೆಚ್ಚಿಳ್ಳ ಹಾಗೂ ತಾಲೂಕಿನ 11.015 ಎಕರೆ ಪ್ರದೇಶಕೆಕ ನೀರು ಹರಿಸಲು ಹಾಗೂ 0.062 ಟಿಎಂಸಿ ನೀರು ಕುಡಿಯುವ ಬಳಕೆಗೆ ಮೀಸಲಿಡಲಾಗಿತ್ತು. ನನಗೆ ರಾಜಕೀಯ ಶಕ್ತಿ ನೀಡಿದ ಮಾಗಡಿ ಜನತೆಯ ಋಣ ತೀರಿಸಬೇಕು ಎಂಬ ಚಿಂತನೆಯಿಂದ ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆಯ ಎಂಜಿನಿಯರ್ ಅವರೊಂದಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಚರ್ಚಿಸಿದ್ದರು.
ನಂತರ ಆಗಿನ ಕೇಂದ್ರ ಕಾನೂನು ಮಂತ್ರಿಯಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿ ಅವರೊಂದಿಗೆ ಚರ್ಚಿಸಿದರು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆ ಸಿಕ್ಕಿತು. 325 ಕೋಟಿ ರೂ. ಹಣ ಮಂಜೂರು: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ ಸುಮಾರು 96 ಕೋಟಿ ಅನುದಾನ ಬಿಡುಗಡೆಗೊಳಿಸಿ, ಡಿಪಿಆರ್ ತಯಾರಿಸಲು ಸುಚಿಸಿದ್ದರು. ನಂತರದಲ್ಲಿ ಪರಿಸ್ಕೃತ ಅಂದಾಜು 124 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಅದೇ ಸಮಯಕ್ಕೆ ಸರ್ಕಾರದ ಅವಧಿ ಮುಗಿದಿದ್ದರಿಂದ ಹೇಮಾವತಿ ಯೋಜನೆ ಮತ್ತೆ ಸ್ಥಗಿತಗೊಂಡಿತು.
ಸಿದ್ದರಾಮಯ್ಯ ಸಿಎಂ ಆದ ನಂತರ ಲೋಕಸಭೆ ಉಪ ಚುನಾವಣೆ ಪ್ರಚಾರಕ್ಕೆ ಮಾಗಡಿಗೆ ಬಂದ ಸಮಯದಲ್ಲಿ ಹೇಮಾವತಿ ಯೋಜನೆಗೆ ಚಾಲನೆ ನೀಡಿದ್ದರು. ಈಗ ಸಿಎಂ ಬಿಎಸ್‌ವೈ, ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ ದ್ದಾರೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ವಿವರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್, ತಾಲೂಕು ಅಧ್ಯಕ್ಷ ಎಂ.ಜಿ.ರಂಗಧಾಮಯ್ಯ, ಎಂ.ಆರ್.ರಾಘವೇಂದ್ರ, ರಾಜೇಶ್, ಶಂಕರ್, ಶೇಷಪ್ಪ, ನಾಗರಾಜು ಹಾಜರಿದ್ದರು.