ಬಳ್ಳಾರಿ: “ನಾನು ದಡ್ಡ’ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಪ್ರತಿ 13 ಕಿ.ಮೀ.ಗೆ ಭಾಷೆ ಬದಲಾವಣೆ ಯಾಗುತ್ತದೆ ಎಂಬುದನ್ನು ಸಿದ್ದರಾಮಯ್ಯ ಅರಿಯಬೇಕು ಎಂದು ಶ್ರೀರಾಮುಲು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಪದೇ ಪದೇ ನನಗೆ ಕನ್ನಡ ಮಾತನಾಡಲು ಬರಲ್ಲ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ವಕೀಲರಾಗಿದ್ದವರು. ಹಲವು ವರ್ಷಗಳ ಕಾಲ ಮಕ್ಕಳಿಗೆ ವ್ಯಾಕರಣ ಪಾಠ ಮಾಡಿದಂತವರು. ಅವರಂತೆ ನಾನು ಓದಿಕೊಂಡವನಲ್ಲ. “ನಾನು ದಡ್ಡ’ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಪ್ರತಿ 13 ಕಿ.ಮೀ.ಗೆ ಭಾಷೆ ಬದಲಾವಣೆಯಾಗುತ್ತದೆ ಎಂಬುದನ್ನು ಅವರು ಅರಿಯಬೇಕು. ನನ್ನ ಭಾಷೆ ಹೀಗೆ.
ಗ್ರಾಮೀಣ ಸೊಗಡಿನಿಂದ ಕೂಡಿರುತ್ತದೆ.
ನನಗೆ ಭಾಷೆ ಬರಲ್ಲ ಎಂದು ಸಿದ್ದರಾಮಯ್ಯ, ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದರು. ಅಲ್ಲದೇ, ಸಿದ್ದರಾಮಯ್ಯನವರು ನನಗೆ 371(ಜೆ) ಗೊತ್ತಿಲ್ಲ. ಗೊತ್ತಿರುವುದು 320, 420, 307 ಐಪಿಸಿ ಸೆಕ್ಷನ್‌ಗಳಷ್ಟೇ ಎಂದಿದ್ದಾರೆ. ಆದರೆ, ನನಗೆ ಬಾಬಾ ಸಾಹೇಬ್ ಡಾ| ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ಗೊತ್ತು. ಬೇರೇನೂ ಗೊತ್ತಿಲ್ಲ. ಜತೆಗೆ, ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಗಿದ್ದ 108 ಆ್ಯಂಬುಲೆನ್ಸ್ ಬಳಸುವ ಪ್ರತಿಯೊಬ್ಬರಿಗೂ ನನ್ನ ನೆನಪಿದೆ ಎಂದು ತಿರುಗೇಟು ನೀಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 78 ಕ್ಷೇತ್ರಗಳಲ್ಲಿ ಜಯ ಗಳಿಸಿ ರುವ ಕಾಂಗ್ರೆಸ್ ನವರು, ಅಧಿಕಾರ ಕೈ ತಪ್ಪಲಿದೆ ಎಂಬ ಭಯದಿಂದ ಅಪ್ಪ, ಮಕ್ಕಳು (ದೇವೇಗೌಡ, ಕುಮಾರಸ್ವಾಮಿ) ಎಷ್ಟೇ ಕಾಟಕೊಟ್ಟರೂ, ಸಹಿಸಿಕೊಳ್ಳುತ್ತಿದ್ದಾರೆ ಎಂದರು