ಬೆಂಗಳೂರು: ಮಾಸಿಕ ಕನಿಷ್ಠ ಗೌರವಧನ ಸೇರಿದಂತೆ 10 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ಆಶಾ ಕಾರ್ಯಕರ್ತರ ಏಳು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಆಶಾ ಕಾರ್ಯಕರ್ತರ ಪ್ರತಿಭಟನೆ ಪೂರ್ವ ನಿಗಧಿಯಾಗಿತ್ತು. ಹೀಗಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಮೂರು ದಿನಗಳ ಹಿಂದೆಯೇ ಸಭೆ ಮಾಡಲಾಗಿದೆ. ಆಶಾ ಕಾರ್ಯಕರ್ತರು 10 ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ನಾವು ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ 7 ಬೇಡಿಕೆ ಈಡೇರಿಸಿದ್ದೇವೆ ಎಂದರು.
ಆಶಾ ಕಾರ್ಯಕರ್ತರು ರಾಜ್ಯದಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಆಶಾ ಕಾರ್ಯಕರ್ತೆಯರು ತಾಯಂದಿರ ರೀತಿ. ಅವರ ಬೇಡಿಕೆಗೆ ಸ್ಪಂದಿಸಲು ನಾನು ನಮ್ಮ ಸರ್ಕಾರ ಸದಾ ಸಿದ್ಧ. ಆಯುಷ್ಮಾನ್ ಭಾರತ ಯೋಜನೆಯಡಿ ಬಿಪಿಎಲ್ ಕಾರ್ಡ್ ನೀಡಲು ಕೇಳಿದ್ದನ್ನು ಒಪ್ಪಿದ್ದೇವೆ. ಆಶಾ ಕಾರ್ಯಕರ್ತರಿಗೆ ಫೋರ್ಟಲ್ ನಲ್ಲಿ ಮಾಹಿತಿ ನೀಡಲು ಹೇಳಿದ್ದೇನೆ ಎಂದರು.
6 ಸಾವಿರ ರೂ.ಗಳನ್ನು ಏಕಕಾಲಕ್ಕೆ ಸಂಬಳ ನೀಡಲು ಸೂಚನೆ ನೀಡಲಾಗಿದೆ. ಅವರು 12 ಸಾವಿರ ಸಂಬಳ ನೀಡಲು ಕೇಳ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಂಬಳ ಹೆಚ್ಚಿದೆ ಎನ್ನುವುದು ಅವರ ವಾದ. ಸರ್ಕಾರ 1000 ರೂ ಸಂಬಳ ಹೆಚ್ಚಳ ಮಾಡಲು ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಆರ್ಥಿಕ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಬೇಕಾಗುತ್ತೆ ಎಂದರು.
ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ವಾಟ್ಸಪ್ ಗ್ರೂಪ್ ಕೂಡ ಮಾಡಲಾಗಿದೆ. ಇಡೀ ರಾಜ್ಯದ ಆಶಾ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ದಯಮಾಡಿ ಎಲ್ಲ ಆಶಾ ಕಾರ್ಯಕರ್ತರು, ತಾಯಂದಿರು ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.