Advertisement

ಹೊಸ ಪಕ್ಷ ಕಟ್ಟೋದು ರೆಡ್ಡಿ ವಿವೇಚನೆಗೆ ಬಿಟ್ಟದ್ದು: ರಾಮುಲು

08:33 PM Dec 04, 2022 | Team Udayavani |

ಬಳ್ಳಾರಿ: ಹೊಸ ಪಕ್ಷ ಸ್ಥಾಪಿಸುವುದು ಜನಾರ್ದನ ರೆಡ್ಡಿ ವಿವೇಚನೆಗೆ ಬಿಟ್ಟ ವಿಚಾರ. ಆದರೆ ರಾಜಕೀಯವಾಗಿ ಎಲ್ಲೇ ಇದ್ದರೂ ಅವರಿಗೆ ಒಳ್ಳೆಯದಾಗಲಿ ಎನ್ನುವ ಮೂಲಕ ಸಾರಿಗೆ ಸಚಿವ ಶ್ರೀರಾಮುಲು, ರೆಡ್ಡಿ-ಬಿಜೆಪಿ ಸಂಬಂಧ ಹಳಸಿದೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಕ್ಷ ಕಟ್ಟುವುದು ಜನಾರ್ದನ ರೆಡ್ಡಿ ಅವರ ವಿವೇಚನೆಗೆ ಬಿಟ್ಟಿದ್ದು. ಜನಾರ್ದನ ರೆಡ್ಡಿ ಅಸಮಾಧಾನ ಕುರಿತು ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಮುಂದಿನದ್ದು ಅವರ (ಜನಾರ್ದನ ರೆಡ್ಡಿ) ವಿವೇಚನೆಗೆ ಬಿಟ್ಟದ್ದು. ರಾಜಕೀಯವಾಗಿ ಎಲ್ಲೇ ಇದ್ದರೂ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ನೋಂದಣಿ ಆಗಿರುವ ಕುರಿತು ನನಗೆ ಸ್ಪಷ್ಟತೆ ಇಲ್ಲ. ಆದರೆ, ಜನಾರ್ದನ ರೆಡ್ಡಿ ಈ ಭಾಗದ ಪ್ರಭಾವಿ ನಾಯಕರಾಗಿದ್ದಾರೆ. ಹೊಸ ಪಕ್ಷ ಕಟ್ಟುವ ಕುರಿತು ನನ್ನೊಂದಿಗೆ ಚರ್ಚೆ ಮಾಡಿಲ್ಲ. ಕೆಲವು ವಿಚಾರಗಳಲ್ಲಿ ಬಿಜೆಪಿ ಮೇಲೆ ಅವರಿಗೆ ಬೇಸರವಾಗಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದರು.

ಸ್ನೇಹ-ರಾಜಕೀಯ ಬೇರೆ ಬೇರೆ:

ಪೂರ್ವ ನಿಯೋಜಿತ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಲ್ಲಿ ನಡೆದ ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಲಿಲ್ಲ. ಜೈಪುರದಲ್ಲಿ ಸ್ವಾಮೀಜಿಯೊಬ್ಬರ ತಂಗಿ ಮದುವೆ ಇತ್ತು. ಅಲ್ಲಿಂದ ವಾಪಸ್‌ ಬರುವಾಗಲೇ ತಡರಾತ್ರಿ ಆಗಿತ್ತು. ಹಾಗಾಗಿ ನಾನು ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಲಾಗಿಲ್ಲ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾಮಕರಣಕ್ಕೆ ಹೋಗಿಲ್ಲ ಎಂದ ಮಾತ್ರಕ್ಕೆ ರೆಡ್ಡಿ-ರಾಮುಲು ನಡುವೆ ಭಿನ್ನಾಭಿಪ್ರಾಯವಲ್ಲ. ರಾಜಕೀಯ ಹೊರತುಪಡಿಸಿ ನಾನು-ಜನಾರ್ದನ ರೆಡ್ಡಿ ಒಳ್ಳೆಯ ಸ್ನೇಹಿತರು. ಕುಟುಂಬ ಸ್ನೇಹ ಬೇರೆ-ರಾಜಕೀಯ ಸ್ನೇಹ ಬೇರೆ. ಕುಟುಂಬದಲ್ಲಿ ಒಂದಾಗಿದ್ದೇವೆ. ಕೆಲವೊಮ್ಮೆ ರಾಜಕೀಯ ಮೇಲು-ಕೀಳು ಆಗಬಹುದು. ರಾಜಕೀಯ ಹೊರತುಪಡಿಸಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next