ಯಡ್ರಾಮಿ: ಹುಬ್ಬಳ್ಳಿಯಲ್ಲಿ ಹಿಂದೂ ದೇವಸ್ಥಾನಗಳು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ತಾಲೂಕಿನ ನಾಗರಳ್ಳಿ ಕ್ರಾಸ್‌ನ ಶ್ರೀ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಶ್ರೀ ಬಸವೇಶ್ವರ ವೃತ್ತದವರೆಗೆ ಗಲಭೆಕೋರರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಜಾಥಾ ನಡೆಸಿದರು.
ಈ ವೇಳೆ ತಾಲೂಕು ಶ್ರೀರಾಮ ಸೇನೆ ಅಧ್ಯಕ್ಷ ಸಿದ್ಧು ಹಂಗರಗಿ ಮಾತನಾಡಿ, ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಡಾ| ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಒಪ್ಪಕೊಳ್ಳದವರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದವರನ್ನು ಪೊಲೀಸನವರು ಈಗಾಗಲೇ ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಶ್ರೀರಾಮ ಸೇನೆ ಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಬಿಜೆಪಿ ಮುಖಂಡ ರಮೇಶ ಸಾಹು ಸೂಗೂರ ಮಾತನಾಡಿ, ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ದ್ರೋಹಿಗಳನ್ನು ಕೂಡಲೇ ರಾಜ್ಯ ಸರ್ಕಾರ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಶ್ರೀರಾಮ ಸೇನೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರುದ್ರಗೌಡ ಬಿರಾದಾರ, ರಮೇಶ ಸಾಹು ಸೂಗೂರ, ಪ್ರದೀಪ ಕುಳಗೇರಿ, ವಿರೂಪಾಕ್ಷಿ ಪಾಟೀಲ,ಗುರುಪಾದಗೌಡ ಬಿರಾದಾರ, ಬಸಲಿಂಗ ಸಾಹು ಕುಳಗೇರಿ, ಸುರೇಶ ಸಾಹು ನಾಗರಾಳ, ಸೀತಾರಾಮ ಚೌಹ್ವಾಣ, ಶರಣಕುಮಾರ ಕುಳೆಕುಮಟಗಿ, ಪ್ರಮೋದ ಸಾಹು, ಈರಣ್ಣ ಹೆಳವರ, ವೀರೇಶ ಹಿರೇಮಠ, ಕಾಶಿ ಕುಳಗೇರಿ, ಸಂತೋಷ ಹೊನ್ನಳ್ಳಿ, ಗ್ರಾಮ ಲೆಕ್ಕಿಗ ಮಹಿಬೂಬ ಟೇಲರ್, ಜಗನ್ನಾಥ ಹಾಗೂ ಬಿಜೆಪಿ, ಹಿಂದೂಪರ ಕಾರ್ಯಕರ್ತರು ಇದ್ದರು.