ಗದಗ: ಶಬ್ಧ ಮಾಲಿನ್ಯ ಮಾಡುವ ಹಾಗೂ ಅನಧಿಕೃತ ಮೈಕ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು, ಕಾರ್ಯಕರ್ತರು ಸಚಿವ ಸಿ.ಸಿ. ಪಾಟೀಲ ಅವರ ಜನಸಂಪರ್ಕ ಕಾರ್ಯಾ ಲಯದ ಎದುರು ಬುಧವಾರ ತಾಳದೊಂದಿಗೆ ರಾಮ, ದತ್ತಾತ್ರೆಯ ಭಜನೆ ಮಾಡುತ್ತ ಪ್ರತಿಭಟನೆ ನಡೆಸಿದರು.
ಕಳೆದ ಮೇ 8ರಂದು ಶ್ರೀರಾಮ ಸೇನೆ ಆರಂಭಿಸಿದ ಹೋರಾಟಕ್ಕೆ ಮಣಿದ ಸರ್ಕಾರ, ಮಸೀದಿ, ಮಂದಿರ ಸೇರಿ ಚರ್ಚ್‌ಗಳ ಅನ ಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಅಲ್ಲದೇ, ನಿಯಮಗಳನ್ವಯ 15 ದಿನಗಳ ಒಳಗೆ ಪರವಾನಗಿ, ರಾತ್ರಿ 10ರಿಂದ ಬೆಳಗಿನ 6ರ ವರೆಗೆ ಧ್ವನಿವರ್ಧಕ ನಿಷೇಧ ಪಾಲನೆ ಮಾಡುವಂತೆ ಹೇಳಲಾಗಿತ್ತು. ಆದರೆ, ಈವರೆಗೂ ಅಂತಹ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಬ್ಧ ಮಾಲಿನ್ಯ, ಅನಧಿಕೃತ ಮೈಕ್ ವಿರುದ್ಧ 2005ರ ಸುಪ್ರೀಂಕೋರ್ಟ್ ಆದೇಶ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣ ಮಂಡಳಿಯ 1986ರ ಆದೇಶವನ್ನು ಪಾಲಿಸುವಂತೆ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದರೂ ಈವರೆಗೆ ಕ್ರಮ ಜರುಗಿಸಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಸಚಿವ ಸಿ.ಸಿ. ಪಾಟೀಲ ಅವರು ಕೂಡಲೇ ಅನಧಿಕೃತ ಮೈಕ್‌ಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು.
ಸರ್ಕಾರ ಅನಧಿಕೃತ ಮೈಕ್‌ಗಳ ತೆರವಿಗೆ ಮುಂದಾಗದೇ ಇದ್ದಲ್ಲಿ ಮುಂದಿನ ಏಳು ದಿನಗಳೊಳಗಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ಜನಸಾಮಾನ್ಯರೊಂದಿಗೆ ಖುದ್ದಾಗಿ ಅನಧಿಕೃತ ಮೈಕ್ ಗಳ ತೆರವು ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಸಿದರು.
ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ, ಜಿಲ್ಲಾಧ್ಯಕ್ಷ ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಮಹಾಂತೇಶ್ ಪಾಟೀಲ, ಅಶೋಕ ಭಜಂತ್ರಿ, ಸಂಜು ಚಟ್ಟಿ, ಶರಣು ಲಕ್ಕುಂಡಿ, ಭರತ್ ಹೂಗಾರ, ಮಂಜು ಪೂಜಾರ ಇತರರಿದ್ದರು.