ಚಿಕ್ಕಬಳ್ಳಾಪುರ: ಜಿಲ್ಲೆಯ ಇತಿಹಾಸ ಮತ್ತು ಪ್ರವಾಸಿ ತಾಣಗಳನ್ನು ಇಡೀ ಜಗತ್ತಿಗೆ ಪರಿಚಯಿಸುವ ಸಲುವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಚಿಕ್ಕಬಳ್ಳಾಪುರ ಉತ್ಸವ ಅಭೂತಪೂರ್ವ ಯಶಸ್ವಿಯಾದ ಬೆನ್ನಲ್ಲೆ ಇದೀಗ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಕ್ಷೇತ್ರಾದ್ಯಂತ ಸಾರ್ವಜನಿಕರ ವಲಯದಲ್ಲಿ ವಿಷಯ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್ ತಮ್ಮ ಪ್ರಭಾವ ಬೀರಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿಗೆ ಮುಖ್ಯಮಂತ್ರಿ ಬಸರವಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ನೀಡಿದ್ದು, ಇದೀಗ ಕ್ಷೇತ್ರದಲ್ಲಿ ಮತ್ತಷ್ಟು ಪ್ರಭಾವ ಹೆಚ್ಚಿಸಿಕೊಳ್ಳಲು ತಿರುಪತಿಯ ಮಾದರಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಿರ್ಧಸಿದ್ದಾರೆ ಎಂದು ಕ್ಷೇತ್ರದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.
ಮುಂಬರುವ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿರುವ ಸುಧಾಕರ್ ಅವರು ಬಡವರಿಗೆ 22 ಸಾವಿರ ಉಚಿತ ನಿವೇಶನ ನೀಡುವ ಕಾರ್ಯಕ್ರಮ ಕ್ಷೇತ್ರಾದ್ಯಂತ ಸದ್ದು ಮಾಡುತ್ತಿದೆ. ಮತ್ತೂಂದಡೆ ಸಚಿವರು ಚುನಾವಣೆಯ ವೇಳೆಯಲ್ಲಿ ಗಿಮಿಕ್ ಮಾಡಲು ನಿವೇಶನ ಹಂಚಿಕೆ ನಾಟಕವನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಗೂ ಕಾರಣವಾಗಿದ್ದಾರೆ.
ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆ ಚಿಕ್ಕಬಳ್ಳಾಪುರ ಉತ್ಸವವನ್ನು ಆಚರಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರಲ್ಲದೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರನ್ನು ಆಹ್ವಾನಿಸಿ ಜಿಲ್ಲೆಯ ಜನರನ್ನು ಗಮನಸೆಳೆಯುವಂತೆ ಫಲಪುಷ್ಟ ಪ್ರದರ್ಶನ ಮತ್ತು ನರೇಗಾ ಗ್ರಾಮ, ಆಹಾರ ಮೇಳ ಆಯೋಜಿಸಿ ಸಚಿವ ಸಂಪುಟದ ಅನೇಕ ಸಚಿವರು ಮತ್ತು ಹೆಸರಾಂತ ನಟ ನಟಿಯರು, ಕಲಾವಿದರು,ಗಾಯಕರು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಆಹ್ವಾನಿಸಿ ಇಡೀ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಉತ್ಸವ ಸದ್ದು ಮಾಡುವಂತೆ ಆಯೋಜಿಸಿದ್ದರು.
ಬಾಗೇಪಲ್ಲಿಯಲ್ಲಿ ನಡೆದ ಕಲ್ಯಾಣೋತ್ಸವ ಪ್ರೇರಣೆ : ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗಕ್ಕೆ ಹೊಂದುಕೊಂಡಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಮುನಿರಾಜು ಅವರು ಶ್ರೀನಿವಾಸ ಕಲ್ಯಾಣೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಆಮಂತ್ರಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿದರು.
ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಡಾ.ಕೆ.ಸುಧಾಕರ್ ಮೊತ್ತಮ್ಮೆ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ 1 ಲಕ್ಷ ಜನರನ್ನು ಸೇರಿಸಲು ಯೋಜನೆಯನ್ನು ರೂಪಿಸಿದ್ದಾರೆ ಎಂದು ಚರ್ಚೆಗಳು ಮುನ್ನೆಲೆಗೆ ಬಂದಿವೆ.