Advertisement

ಹಳ್ಳಿ ದಸರಾಗೆ ಶ್ರೀನಿವಾಸ ಅಗ್ರಹಾರ ಸಜ್ಜು

04:21 PM Sep 30, 2019 | Suhan S |

ಮಂಡ್ಯ: ಅ.3 ರಿಂದ ಮೂರು ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಪ್ರಯುಕ್ತ ಹಳ್ಳಿ ದಸರಾಗೆ ಆಯ್ಕೆ ಮಾಡಲಾಗಿರುವ ಶ್ರೀನಿವಾಸ ಅಗ್ರಹಾರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

Advertisement

ಭತ್ತ ನಾಟಿ ಹಾಗೂ ರಾಗಿ ಬಿತ್ತನೆಗೆ ಜಮೀನುಗಳನ್ನು ಆಯ್ಕೆ ಮಾಡಲಾಗಿದೆ. ಪ್ರವಾಸಿಗರು ಗ್ರಾಮೀಣ ಶೈಲಿಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನ ಸವಿಯಲು 16 ಕಂಬಗಳ ಮೂರು ಮನೆಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಅಗ್ರಹಾರದಿಂದ ಶ್ರೀ ನಿಮಿಷಾಂಭ ದೇವಸ್ಥಾನ, ಕರೀಘಟ್ಟ ಹಾಗೂ ಶ್ರೀರಂಗನಾಥ ದೇವಸ್ಥಾನದವರೆಗೆ ಪ್ರವಾಸಿಗರು ಸಂಚರಿಸಲು ಅನುಕೂಲವಾಗುವಂತೆ 20 ಎತ್ತಿನ ಗಾಡಿಗಳನ್ನು ಸಜ್ಜುಗೊಳಿಸಲಾಗಿದೆ.

ಪ್ರವಾಸಿಗರಿಗೆ ರಂಜನೆ: ಶ್ರೀರಂಗಪಟ್ಟಣ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ಜಾಲಿ ರೈಡ್‌ ನಡೆಸುವುದಕ್ಕೆ ಈ ಬಾರಿಯ ದಸರೆಯಲ್ಲಿ ಮುಕ್ತ ಅವಕಾಶ ಕಲ್ಪಿಸಿದೆ. ಎತ್ತುಗಳ ಕೊರಳಿಗೆ ಗಂಟೆ ಕಟ್ಟಿ, ಎತ್ತಿನ ಗಾಡಿಯನ್ನು ಬಾಳೆ ಕಂದು, ಮಾವಿನ ಸೊಪ್ಪು, ಹೂವು, ಬಲೂನ್‌ಗಳಿಂದ ಅಲಂಕರಿಸಿ ಪ್ರವಾಸಿಗರನ್ನು ಅದರೊಳಗೆ ಕೂರಿಸಿಕೊಂಡು ಸಂಚರಿಸಲು ವ್ಯವಸ್ಥೆ ಮಾಡಿದೆ.

ಶ್ರೀನಿವಾಸ ಅಗ್ರಹಾರದಿಂದ ಶ್ರೀನಿಮಿಷಾಂಬ ದೇಗುಲ, ಕರೀಘಟ್ಟ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಎತ್ತಿನಗಾಡಿಯಲ್ಲಿ ಕರೆದೊಯ್ಯಲಾಗುವುದು. ಒಂದೊಂದು ಸ್ಥಳಕ್ಕೆ ಒಂದೊಂದು ರೀತಿಯ ದರ ನಿಗದಿಪಡಿಸಲಾಗಿರುತ್ತದೆ. ಇದರ ಅನುಭವ ಪಡೆಯಲಿಚ್ಚಿಸುವವರು ಹಣ ಪಾವತಿಸಿ ಸಂಚರಿಸಬಹುದು. ಪ್ರವಾಸಿಗರನ್ನು ಹಳ್ಳಿ ದಸರಾದೊಂದಿಗೆ ತೊಡಗಿಸಿಕೊಳ್ಳುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಶ್ರೀನಿವಾಸ ಅಗ್ರಹಾರದಿಂದ ಹೊರಡುವ ಸಂಚಾರದ ದಾರಿಯುದ್ದಕ್ಕೂ ಮನೆಗಳ ಎದುರು ಸಗಣಿ ನೀರು ಹಾಕಿ, ಹಾದಿಯನ್ನು ರಂಗೋಲಿಗಳಿಂದ ಸಿಂಗರಿಸಿ ಮೆರುಗು ನೀಡಲಾಗುವುದು.

ಗ್ರಾಮೀಣ ಶೈಲಿಯ ಆಹಾರ ಮೇಳ: ಹಳ್ಳಿ ದಸರಾದಲ್ಲಿ ಅಪ್ಪಟ ಹಳ್ಳಿ ಸೊಗಡಿನ ಆಹಾರವನ್ನು ಹೊರರಾಜ್ಯ ಹಾಗೂ ವಿದೇಶದಿಂದ ಬರುವ ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ 16 ಕಂಬಗಳ ಮೂರು ಮನೆಗಳನ್ನು ಆಯ್ಕೆ ಮಾಡಲಾಗಿದೆ. ರಾಗಿ ಮುದ್ದೆ, ಉಪ್ಪೆಸರು, ಬಸ್ಸಾರು, ಸೊಪ್ಪಿನ ಸಾರು, ತರಕಾರಿ ಸಾಂಬರು, ಮೊಳಕೆ ಕಾಳು ಸಾರು, ಕಳಲೆ ಸಾಂಬಾರು, ಕಡಲೆಕಾಳು, ಹೆಸರುಕಾಳು,ಹುರಳಿಕಾಳುಗಳನ್ನೊಳಗೊಂಡ ಸಾಂಬಾರು, ಅವರೆಕಾಳು ಗೊಜ್ಜು, ಕಡಲೆಕಾಳು ಗುಗ್ಗರಿ, ಮೊಸರು, ಮಜ್ಜಿಗೆ, ಅನ್ನ ಸೇರಿದಂತೆ ನಾನಾ ಮಾದರಿಯ ತಿನಿಸುಗಳನ್ನು ತಯಾರಿಸಿ ನೀಡಲುಸಿದ್ಧತೆ ನಡೆಸಲಾಗಿದೆ.

Advertisement

ಹಳ್ಳಿ ಶೈಲಿಯ ಮಾಂಸಾಹಾರಿ ತಿನಿಸುಗಳಿಗೂ ಅವಕಾಶ ದೊರಕಿಸಿದ್ದು, ನಾಟಿಕೋಳಿ ಸಾರು, ಮುದ್ದೆ, ತಲೆಮಾಂಸದ ಸಾರು, ಕಾಲ್‌ಸೂಪ್‌, ಮಾಂಸದ ಸಾರು, ಈರುಳ್ಳಿ-ಬೆಳ್ಳುಳ್ಳಿ ಮಸಾಲೆಯೊಂದಿಗೆ ಹುರಿದ ಮಾಂಸ, ಬಿರಿಯಾನಿ, ಬೋಟಿಗೊಜ್ಜು, ಪಲಾವ್‌, ಚಾಪ್ಸ್‌, ಮೀನು ಸಾಂಬಾರು, ಬೇಯಿಸಿದ ನಾಟಿಕೋಳಿ ಮೊಟ್ಟೆ ಸೇರಿದಂತೆ ಹಲವು ಮಾದರಿಗಳಲ್ಲಿ ರುಚಿಯಾದ ಭೋಜನ ಸಿದ್ಧಪಡಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನ ಪ್ರತ್ಯೇಕ ಮನೆಗಳಲ್ಲಿ ತಯಾರಿಸಲಾಗುತ್ತದೆ. ಒಂದೊಂದು ಊಟಕ್ಕೂ ಒಂದೊಂದು ರೀತಿಯ ಬೆಲೆ ನಿಗದಿಪಡಿಸಿದ್ದು, ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಅಪ್ಪಟ ಗ್ರಾಮೀಣ ಶೈಲಿಯ ತಿನಿಸುಗಳ ಸವಿಯನ್ನು ಸವಿಯಬಹುದು. ನೆಲದ ಮೇಲೆ ಚಾಪೆ ಹಾಸಿ ಅದರ ಮೇಲೆ ಕುಳಿತು ಊಟ ಮಾಡುವ ಅನುಭವ ಪ್ರವಾಸಿಗರಿಗೆ ದೊರಕಲಿದೆ.

ಭತ್ತ ನಾಟಿ, ರಾಗಿ ಬಿತ್ತನೆ ವ್ಯವಸ್ಥೆ: ಹೊರಗಿನಿಂದ ಬರುವ ಪ್ರವಾಸಿಗರಿಗೆ ಭತ್ತ ನಾಟಿ, ರಾಗಿ ಬಿತ್ತನೆ ಮಾಡುವುದಕ್ಕೂ ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿ ಜಮೀನುಗಳನ್ನು ಗುರುತಿಸಿದ್ದು, ಭತ್ತ ನಾಟಿ ಮಾಡಲು ಇಚ್ಚಿಸುವವರು ಗ್ರಾಮೀಣ ಶೈಲಿಯ ಬಟ್ಟೆ ತೊಟ್ಟು ಕೆಸರುಗದ್ದೆಗೆ ಇಳಿದು ನಾಟಿ ಮಾಡಬಹುದು.ರಾಗಿ ಹೇಗೆ ಬಿತ್ತನೆ ಮಾಡುವರು ಎನ್ನುವುದನ್ನು ಸ್ವತಃ ತಾವೇ ಅನುಭವ ಪಡೆಯುಬಹುದು.

Advertisement

Udayavani is now on Telegram. Click here to join our channel and stay updated with the latest news.

Next