Advertisement

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

06:02 PM Nov 08, 2024 | Team Udayavani |

ಬೆಳಗಾವಿ: ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಸದಾ ಸುದ್ದಿ ಮಾಡುವ ಗಡಿ ಜಿಲ್ಲೆ ಬೆಳಗಾವಿ ಈಗ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲೂ ಸದ್ದು ಮಾಡಿದೆ. ಬೆಳಗಾವಿಯ ಶ್ರೀನಿವಾಸ ಠಾಣೇದಾರ ಎಂಬುವರು ಅಮೆರಿಕ ಸಂಸತ್‌ಗೆ ಆಯ್ಕೆಯಾಗುವ ಮೂಲಕ ಕನ್ನಡದ ಕಲರವ ದೊಡ್ಡಣ್ಣನ ರಾಷ್ಟ್ರದಲ್ಲಿ ಹರಡುವಂತೆ ಮಾಡಿದ್ದಾರೆ.

Advertisement

ಅಮೆರಿಕದ ಸಂಸತ್‌ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಚಿಗನ್‌ ರಾಜ್ಯದಿಂದ ಸ್ಪ ರ್ಧಿಸಿದ್ದ ಬೆಳಗಾವಿಯ ಶ್ರೀನಿವಾಸ ಸಾಹಿತಿ, ವಿಜ್ಞಾನಿ ಹಾಗೂ ಅಮೆರಿಕದ ಪ್ರಖ್ಯಾತ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ.

ಶ್ರೀನಿವಾಸ್‌ ಠಾಣೇದಾರ 1955ರ ಫೆ.22ರಂದು ಚಿಕ್ಕೋಡಿಯಲ್ಲಿ ಜನಿಸಿದ್ದಾರೆ. ತಂದೆ ಆರ್ಥಿಕವಾಗಿ ಹೇಳಿಕೊಳ್ಳುವಂತಹ ಕುಟುಂಬವಲ್ಲ. ಶ್ರೀನಿವಾಸ್‌ ಅವರ ತಂದೆ ಬೆಳಗಾವಿ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಚಿಕ್ಕೋಡಿ ಬಿಟ್ಟು
ಬೆಳಗಾವಿಯ ಶಹಾಪುರದ ಮೀರಾಪುರ ಗಲ್ಲಿಯಲ್ಲಿ ವಾಸವಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬೆಳಗಾವಿಯ ಚಿಂತಾಮಣರಾವ್‌ ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ ಪೂರ್ಣಗೊಳಿಸಿದ ಶ್ರೀನಿವಾಸ ಅವರು ಕರ್ನಾಟಕ ವಿಶ್ವವಿದ್ಯಾಲದಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ.

1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀನಿವಾಸ್‌, 1979ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಮುಂದೆ 1982ರಲ್ಲಿ ಪಾಲಿಮರ್‌ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌ಡಿ ಪದವಿ ಗಳಿಸಿದ ನಂತರ 1982ರಿಂದ 1984ರವೆಗೆ ಮಿಚಿಗನ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. 1984ರಿಂದ 1990ರವರೆಗೆ ಪಾಲಿಮರ್‌ ಸಿಂಥೆಸಿಸ್‌ ಕೆಮಿಸ್ಟ್‌ ಹಾಗೂ ಪ್ರಾಜೆಕ್ಟ್ ಲೀಡರ್‌ ಆಗಿ ಪೆಟ್ರೊಲೈಟ್‌ ಕಾರ್ಪೊರೇಷನ್‌ನಲ್ಲಿ  ಕಾರ್ಯನಿರ್ವಹಿಸಿದ ನಂತರ ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ್ದರು.

ಶ್ರೀನಿವಾಸ ಅವರ ಸಾಧನೆಗೆ ಚಿಂತಾಮಣರಾವ್‌ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೆಮ್ಮೆ ಇದೆ. ಬಹಳ ವರ್ಷಗಳ ಹಿಂದೆ ಬೆಳಗಾವಿಗೆ ಬಂದಾಗ ಒಮ್ಮೆ ಶಾಲೆಗೆ ಅವರು ಭೇಟಿ ನೀಡಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ. ಶ್ರೀನಿವಾಸ ಆಡಿ ಬೆಳೆದ ಬೆಳಗಾವಿ ಮನೆ ಈಗ ಇಲ್ಲ. ಈ ಮನೆಯ ಜಾಗದಲ್ಲಿ ದೊಡ್ಡ ಮನೆಗಳಾಗಿವೆ. ಆದರೆ ಶ್ರೀನಿವಾಸ ಅವರ ಅಂದಿನ ದಿನಗಳು ಹಾಗೂ ಅವರ ಜೊತೆ ಆಟ ಆಡಿದ ಗೆಳೆಯರಿಗೆ ಈಗಲೂ ಹಿಂದಿನ ದಿನಗಳ ಸುಮಧುರ ಕ್ಷಣಗಳ ನೆನಪು ಇದೆ. ಈಗ ನೆನಪುಗಳ ಜೊತೆಗೆ ಶ್ರೀನಿವಾಸ ಅವರ ಸಾಧನೆ ಹೆಮ್ಮೆ ಬರುವಂತೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next