Advertisement

ಮರಳು ತಾಣ ಗುರುತಿಸಲು ಸಚಿವ ಕೋಟ ಸೂಚನೆ

09:50 PM Aug 11, 2020 | mahesh |

ಮಹಾನಗರ: ಜಿಲ್ಲೆಯಲ್ಲಿ ಹಳ್ಳ, ತೊರೆಗಳಲ್ಲಿರುವ ಮರಳನ್ನು ತೆಗೆಯುವ ಸಲುವಾಗಿ ಮುಂದಿನ 15 ದಿನಗಳೊಳಗೆ ಇಂತಹ ಸ್ಥಳಗಳನ್ನು ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಹಶೀಲ್ದಾರ್‌ ನೇತೃತ್ವದಲ್ಲಿ ಲೋಕೋ ಪಯೋಗಿ, ಅರಣ್ಯ, ಗಣಿ ಇಲಾಖೆ ಅಧಿಕಾರಿಗಳು, ಪಿಡಿಒಗಳನ್ನೊಳಗೊಂಡ ಜಂಟಿ ತಂಡ ಸ್ಥಳ ಪರಿಶೀಲನೆ ಮಾಡಿ ಪರಿಶೀಲನೆ ವರದಿಯನ್ನು ತಾಲೂಕು ಮರಳು ಸಮಿತಿಯ ಶಿಫಾರಸ್ಸಿಗೆ ಜಿಲ್ಲಾ ಸಮಿತಿಗೆ ವರದಿ ನೀಡಬೇಕು. ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಲಘ ವಾಹನಗಳ ಬಳಕೆಗೆ ಅವಕಾಶ
ರಾಜ್ಯದಲ್ಲಿ ಮರಳನ್ನು ಸಾಗಿಸಲು ಟ್ರ್ಯಾಕ್ಟರ್‌, ಎತ್ತಿನಗಾಡಿಗಳಂತಹ ಲಘು ವಾಹನಗಳನ್ನು ಬಳಸಲು ಮರಳು ನೀತಿಯಲ್ಲಿ ಅವಕಾಶವಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಇಂತಹ ವಾಹನಗಳ ಬಳಕೆ ಕಡಿಮೆ ಇರುವುದರಿಂದ ಇದರ ಬದಲು 407 ಮಿನಿ ಲಾರಿ, ಲಘು ಟಿಪ್ಪರ್‌ಗಳಂತಹ ವಾಹನಗಳಲ್ಲಿ ಮರಳು ಕೊಂಡೊಯ್ಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು.

ಹೊಳೆ, ನದಿಗಳಲ್ಲಿ ಲಭ್ಯವಿರುವ ಮರಳಿನ ಗಣಿಗಾರಿಕೆ ಮಾಡಲು ರಾಜ್ಯ ಮಿನರಲ್‌ ಕಾರ್ಪೊರೇಶನ್‌ಗೆ ಅಧಿಕಾರ ನೀಡಲಾಗುವುದು. ಈಗಾಗಲೇ ಗುರುತಿಸಲಾಗಿರುವ 30 ಬ್ಲಾಕ್‌ಗಳನ್ನು ಅವರಿಗೆ ವಹಿಸಲಾಗುವುದು. ಅದೇ ರೀತಿ ಅಣೆಕಟ್ಟು, ಜಲಾಶಯ, ಡ್ಯಾಂಗಳ ವ್ಯಾಪ್ತಿಯಲ್ಲಿ ಹಾಗೂ ಹಿನ್ನೀರಿನ ಪ್ರದೇಶಗಳಲ್ಲಿ ಲಭ್ಯವಿರುವ ಮರಳನ್ನು ಗುರುತಿಸಲು ಅಧಿಕಾರಿಗಳ ತಂಡ ಜಂಟಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರಿಗೆ ಮರಳನ್ನು ಒಂದು ಟನ್‌ಗೆ 700ರೂ. ನಂತೆ ಮಾರಾಟ ದರ ನಿಗದಿಪಡಿಸಲಾಗಿದೆ. ಈ ದರವನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಲಾಗಿದೆ. ಪ್ರಸಕ್ತ ಶ್ರೇಣಿ 1,2,3ರಲ್ಲಿರುವ ಮರಳನ್ನು ಗ್ರಾ.ಪಂ. ಗಳ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಲು ಚಿಂತಿಸಲಾಗಿದೆ ಎಂದ ಅವರು ನಗರ ಪ್ರದೇಶಗಳಲ್ಲಿ ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಈ ಅನುಮತಿ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚಿಸಿದರು.

Advertisement

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ, ಅಪರ ಜಿಲ್ಲಾಧಿಕಾರಿ ರೂಪಾ, ಡಿಸಿಪಿ ಅರುಣಾಂಶು ಗಿರಿ, ಗಣಿ ಇಲಾಖೆ ಉಪನಿರ್ದೇಶಕ ರಾಂಜಿ ನಾಯ್ಕ ಮತ್ತಿತರರು ಇದ್ದರು.

ಸಿಆರ್‌ಝಡ್‌: ಶೀಘ್ರ ಸಭೆ
ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 14 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ.ಈ ಸಂಬಂಧ ಗಣಿ ಸಚಿವರ ಅಧ್ಯಕ್ಷತೆಯಲ್ಲಿ 3-4 ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next