Advertisement

ಶ್ರೀನಿವಾಸ ಜೋಕಟ್ಟೆ ಅವರ ಕಥಾ ಸಂಕಲನ ಬಿಡುಗಡೆ

03:22 PM Apr 04, 2019 | Vishnu Das |

ಮುಂಬಯಿ: ಸಾಹಿತ್ಯದ ಅಭಿವ್ಯಕ್ತಿಯೂ ಇಂದು ರಾಜಕಾರಣದ ಮುಖವಾಡದ ಒಂದು ಭಾಗವೇ ಆಗುತ್ತಿದ್ದು, ಇಲ್ಲಿಯೂ ಗುಂಪುಗಾರಿಕೆ ನುಸುಳುತ್ತಿರುವ ಈ ಕಾಲಘಟ್ಟದಲ್ಲಿ ಪತ್ರಕರ್ತರ, ಲೇಖಕರ ಜವಾಬ್ದಾರಿ ಅಧಿಕ. ಇಂತಹ ಕಾಲಘಟ್ಟದಲ್ಲಿ ದೂರದ ಮುಂಬೈಯಲ್ಲಿದ್ದು ತಾಜಾ ಮತ್ತು ಶುದ್ಧ ಪುರೋಗಾಮಿ ದೃಷ್ಟಿಯ ಕತೆಗಳ ಮೂಲಕ ಸಹೃದಯ ಲೇಖಕ ಶ್ರೀನಿವಾಸ ಜೋಕಟ್ಟೆ ಗಮನ ಸೆಳೆಯುತ್ತಾರೆ. ವರ್ತಮಾನದಲ್ಲಿ ಜೋಕಟ್ಟೆ ಕತೆಯ ಮೂಲಕ ನಿಲ್ಲುತ್ತಾರೆ ಅಂತಾದರೆ ಅವರಿಗೆ ಕತೆಯನ್ನು ಹೆಣೆಯುವ ಮತ್ತು ವಸ್ತುವನ್ನು ಆಯ್ಕೆ ಮಾಡುವ, ಅದರ ಜತೆಗೆ ಆ ವಸ್ತುವಿನ ಭಾರದಿಂದ ಹೊರನಿಲ್ಲುವ ಗುಣ ಸಿದ್ಧಿಸಿದೆ ಎಂದು ಪತ್ರಕರ್ತ ಬಿ. ಗಣಪತಿ ನುಡಿದರು.

Advertisement

ಬೆಂಗಳೂರಿನ ಸುಂದರ ಪ್ರಕಾಶನ – ಸುಂದರ ಸಾಹಿತ್ಯ – ಚತುರ್ಮುಖ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ಮಾ. 31ರಂದು ಬೆಳಗ್ಗೆ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನಲ್ಲಿ ನಡೆದ ಮುಂಬಯಿ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 34ನೇ ಕೃತಿ ‘ನೇರಪ್ರಸಾರ ಮತ್ತು ಚಿಕ್ಕ ವಿರಾಮ’ ಆಯ್ದ ಕಥಾಸಂಕಲನ ಬಿಡುಗಡೆಗೊಳಿಸಿ ಮಾತನಾಡಿದಅವರು, ಜೋಕಟ್ಟೆಯವರಿಗೆ ಬದುಕನ್ನು ಚೆನ್ನಾಗಿ ನೋಡಲು ಗೊತ್ತಿದೆ. ಅದರಲ್ಲೂ ಬ್ರಾಹ್ಮಣ ಯುವಕ ರಿಗೆ ಬಹಳಷ್ಟು ಸವಾಲುಗಳಿರುತ್ತವೆ. ಇವತ್ತಿನ ಕಾಲಘಟ್ಟದಲ್ಲಂತೂ ಅವನು ಸಂತ್ರಸ್ತನೂ ಹೌದು, ಶಾಪಗ್ರಸ್ತನೂ ಹೌದು. ಆ ಎರಡನ್ನೂ ಜೋಕಟ್ಟೆ ಯವರ ಬರಹಗಳಲ್ಲಿ ನಾನು ಕಂಡಿದ್ದೇನೆ ಎಂದು ನುಡಿದು ಡಾ| ಡಿ. ವಿ. ಗುರುಪ್ರಸಾದ್‌ ಐ.ಪಿ.ಎಸ್‌. ಇವರ “ಪೊಲೀಸ್‌ ಪ್ರಕರಣಗಳು’ ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕೃತಿಕಾರ ಶ್ರೀನಿವಾಸ ಜೋಕಟ್ಟೆ ಅವರು ಮಾತನಾಡಿ, ಈ ತನಕ 60ರಷ್ಟು ಕತೆಗಳನ್ನು ಬರೆದಿದ್ದರೂ ತನ್ನ ಆಯ್ದ ಕಥಾ ಸಂಕಲನದಲ್ಲಿ 28 ಕತೆಗಳಿವೆ. ಕಳೆದ ವರ್ಷ ಸುಧಾ ಪತ್ರಿಕೆಯಲ್ಲಿ ಬಂದ ‘ನೇರಪ್ರಸಾರ ಮತ್ತು ಚಿಕ್ಕ ವಿರಾಮ’ ಕತೆ ಓದಿ ಇಂದಿರಾ ಸುಂದರ್‌ ಅವರು “ಸುಂದರ ಪ್ರಕಾಶನದಿಂದ ಕಥಾಸಂಕಲನ ತರೋಣ’ ಎಂದು ಪ್ರೋತ್ಸಾಹಿಸಿದ್ದರು. ಅದರ ಪ್ರತಿಫಲ ಎಂಬಂತೆ ಇಂದು ಆಯ್ದ ಕತೆಗಳ ಸಂಕಲನ ಬಿಡುಗಡೆಯಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಕಥಾ ಸ್ಪರ್ಧೆಗಳಲ್ಲಿ ತೀರ್ಪುಗಾರನಾಗುವ ಅವಕಾಶ ಸಿಕ್ಕಿದ್ದರಿಂದ ಸುಮಾರು ಇನ್ನೂರರಷ್ಟು ಕತೆಗಳನ್ನು ಓದಬೇಕಾಯಿತು. ಹಾಗಾಗಿ ಈ ಮೂರು ವರ್ಷಗಳಲ್ಲಿ ಹೆಚ್ಚಿಗೆ ಕತೆ ಬರೆಯುವ ಸಾಹಸಕ್ಕೆ ಹೋಗಿಲ್ಲ ಎಂದು ನುಡಿದರು.

ಹಿರಿಯ ಪತ್ರಕರ್ತ ಜಿ. ಎನ್‌. ರಂಗನಾಥ ರಾವ್‌ ಮತ್ತು ಖ್ಯಾತ ಕವಿ ಬಿ. ಆರ್‌. ಲಕ್ಷ್ಮಣ್‌ರಾವ್‌ ಉಪಸ್ಥಿತರಿದ್ದರು. ವತ್ಸಲಾ ಮೋಹನ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶಕಿ ಇಂದಿರಾ ಸುಂದರ್‌ ಸ್ವಾಗತಿಸಿದರು. ಆರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಂ. ಡಿ. ಪಲ್ಲವಿ ಇವರಿಂದ ಭಾವಗೀತೆಗಳ ಗಾಯನ ನಡೆಯಿತು.

ಸುಂದರ ಪ್ರಕಾಶನದ ಸಂಸ್ಥಾಪಕರಾದ ಗೌರಿಸುಂದರ್‌ ಸ್ಮರಣಾರ್ಥ ಪ್ರಪ್ರಥಮ ಗೌರಿಸುಂದರ್‌ ಪ್ರಶಸ್ತಿಯನ್ನು ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿಯವರಿಗೆ ಹಿರಿಯ ಪತ್ರಕರ್ತ ಜಿ. ಎನ್‌. ರಂಗನಾಥ ರಾವ್‌ ಮತ್ತು ಡಾ| ಎಚ್‌. ಎಸ್‌. ವೆಂಕಟೇಶಮೂರ್ತಿ ಹಾಗೂ ಇಂದಿರಾ ಸುಂದರ್‌ ಅವರು ಪ್ರದಾನಿಸಿದರು. ಪುಸ್ತಕ ಪ್ರಕಾಶನದಿಂದ ಸಿನಿಮಾ, ಕಿರುತೆರೆ ಧಾರಾವಾಹಿ ನಿರ್ಮಿಸುವವರೆಗೂ ಗೌರಿಸುಂದರ್‌ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದವರೆಂದು ಜಿ. ಎನ್‌. ರಂಗನಾಥ ರಾವ್‌ ನೆನಪಿಸಿದರು. ಪ್ರಶಸ್ತಿ ಪುರಸ್ಕೃತ ಸುಬ್ರಾಯ ಚೊಕ್ಕಾಡಿಯವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

Advertisement

ಇದೇ ವೇದಿಕೆಯಲ್ಲಿ ಖ್ಯಾತ ಕವಿ ಬಿ. ಆರ್‌. ಲಕ್ಷ್ಮಣ್‌ ರಾವ್‌ ಅವರು ಕವಿ ಕಾವ್ಯ ಕುಸುಮ ಮಾಲೆಯ ಆರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಕವಿ, ವಿಮರ್ಶಕ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಮಾತನಾಡಿ, ಸ್ವಂತಕ್ಕಾಗಿ ಬಹಳ ಜನರು ಬದುಕುತ್ತಾರೆ. ಆದರೆ ಇನ್ನೊಬ್ಬರಿಗಾಗಿ ಬದುಕುತ್ತಿದ್ದ ವರಲ್ಲಿ ಗೌರಿಸುಂದರ್‌ ಅವರೂ ಒಬ್ಬರಾಗಿದ್ದರು. ಅವರ ಹೆಸರಲ್ಲಿ ಈ ಪ್ರಶಸ್ತಿ ಪ್ರದಾನಿಸುತ್ತಿರುವುದು ತುಂಬಾ ಅಭಿಮಾನದ ಸಂಗತಿ ಎಂದರು.
ಅನಂತರ ಡಾ| ಎಚ್‌. ಎಸ್‌. ವೆಂಕಟೇಶಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಿತು. ಸುಬ್ರಾಯ ಚೊಕ್ಕಾಡಿ, ಎಚ್‌. ಎನ್‌. ಆರತಿ, ವಾಸುದೇವ ನಾಡಿಗ್‌, ರೇಣುಕಾ ರಮಾನಂದ್‌, ಮಮತಾ ಅರಸೀಕೆರೆ, ವಿಕ್ರಂ ವಿಸಾಜಿ, ಸ್ಮಿತಾ ಅಮೃತ್‌ರಾಜ್‌, ಎಲ್‌.ಎನ್‌. ಮುಕುಂದ್‌ರಾಜ್‌, ಪೂರ್ಣಿಮಾ ಸುರೇಶ್‌, ಟಿ. ಯಲ್ಲಪ್ಪ, ಚೀಮನಹಳ್ಳಿ ರಮೇಶ್‌ಬಾಬು, ನಂದಿನಿ ವಿಶ್ವನಾಥ್‌, ವಸುಂಧರಾ ಮೊದಲಾದ ಕವಿಗಳು ಕಾವ್ಯ ವಾಚನಗೈದರು. ಕವಿಗೋಷ್ಠಿಯನ್ನು ಬಿ.ಆರ್‌. ಲಕ್ಷ್ಮಣ್‌ ರಾವ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next