“ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಮಾಡಿದ್ದ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್ಜೆ ಶ್ರೀನಿ, ಈಗ ಹೊಸ ಚಿತ್ರದೊಂದಿಗೆ ವಾಪಸ್ಸು ಬಂದಿದ್ದಾರೆ. ಒಂದು ಚಿತ್ರ ಎಂದರೆ ತಪ್ಪಾಗಬಹುದೇನೋ? ಏಕೆಂದರೆ, ಅವರು ಒಂದೇ ಪಾತ್ರವನ್ನಿಟ್ಟುಕೊಂಡು ಮೂರು ಚಿತ್ರಗಳನ್ನು ಮಾಡುವುದಕ್ಕೆ ಹೊರಟಿದ್ದಾರೆ. ಟ್ರಯಾಲಜಿ ಎನ್ನುತ್ತಾರಲ್ಲ ಅದು. ಸತ್ಯಜಿತ್ ರೇ “ಅಪು’ ಟ್ರಯಾಲಜಿ ಮಾಡಿದ್ದರು. ಶ್ರೀನಿವಾಸರಾಜು “ದಂಡುಪಾಳ್ಯ’ ಟ್ರಯಾಲಜಿಯನ್ನು ಮಾಡಿದರು. ಈಗ ಶ್ರೀನಿ, “ಬೀರ್ಬಲ್’ ಟ್ರಯಾಲಜಿ ಮಾಡುವುದಕ್ಕೆ ಹೊರಟಿದ್ದಾರೆ.
ಈ “ಬೀರ್‌ಬಲ್’ ಟ್ರಯಾಲಜಿಯ ಮೊದಲ ಭಾಗವಾದ “ಫೈಂಡಿಂಗ್ ವಜ್ರಮುನಿ’ ಎಂಬ ಚಿತ್ರ ಮುಂದಿನ ತಿಂಗಳು ಪ್ರಾರಂಭವಾಗಲಿದೆಯಂತೆ. ಅದಾದ ನಂತರ “ಅವರನ್ ಬಿಟ್ ಇವರನ್ ಬಿಟ್ ಅವರ್ಯಾರು’ ಮತ್ತು “ತುರೇ ಮಣೆ’ ಚಿತ್ರಗಳು ಬಿಡುಗಡೆಯಾಗಲಿವೆ. ಈ ಮೂರು ಚಿತ್ರಗಳಲ್ಲಿ ಬೀರ್‌ಬಲ್ ಎಂಬ ಲಾಯರ್‌ನ ಕಥೆ ಹೇಳುವುದಕ್ಕೆ ಶ್ರೀನಿ ಹೊರಟಿದ್ದು, ಆ ಲಾಯರ್‌ನ ಮೂರು ಸಾಹಸಗಳನ್ನು ಮೂರು ವಿಭಿನ್ನ ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಬೀರ್‌ಬಲ್ ಎಂಬ ಲಾಯರ್ ಪಾತ್ರವನ್ನು ಅವರೇ ಮಾಡುತ್ತಿದ್ದು, ಮಿಕ್ಕ ಪಾತ್ರಧಾರಿಗಳಿಗೆ ಹುಡುಗಾಟ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ಶ್ರೀನಿ, ಇದೇ ಶನಿವಾರ ಮತ್ತು ಭಾನುವಾರಗಳಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ಆಡಿಷನ್ ಇಟ್ಟುಕೊಂಡಿದ್ದಾರೆ. ಈ ಆಡಿಷನ್‌ಗಳಲ್ಲಿ ಚಿತ್ರದ ಹಲವು ಪಾತ್ರಗಳಿಗೆ ಹೊಸ ಕಲಾವಿದರ ಆಡಿಷನ್ ಮಾಡಲಿದ್ದಾರಂತೆ. ಮೈಸೂರು ಮತ್ತು ಬೆಂಗಳೂರಲ್ಲದೆ ಬೇರೆ ಊರಿನವರು ಸಹ ಆನ್‌ಲೈನ್ ಆಡಿಷನ್ ಮೂಲಕ ಭಾಗವಹಿಸಬಹುದು. ಶ್ರೀನಿ ಸದ್ಯದಲ್ಲೇ ಒಂದು ವಾಟ್ಸ್‌ಪ್ ನಂಬರ್ ಕೊಡಲಿದ್ದು, ಆ ನಂಬರ್‌ಗೆ ನಾಲ್ಕು ಫೋಟೋ ಮತ್ತು ಒಂದು ವೀಡಿಯೋ ಮಾಡಿ ಕಳುಹಿಸಬೇಕು. ಇಷ್ಟವಾದರೆ ಅವರನ್ನು ಸಂಪರ್ಕಿಲಾಗುತ್ತದಂತೆ.
ಇನ್ನು ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಡಿ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು “ಜಾನ್ ಸೀನ’ ಮತ್ತು “ಚಮಕ್’ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ಬ್ಯಾನರ್‌ನ ಮೂರನೆಯ ಚಿತ್ರ. ಕಲಾವಿದರ ಆಯ್ಕೆಯ ಜೊತೆಗೆ ತಂತ್ರಜ್ಞರ ಆಯ್ಕೆಯೂ ನಡೆಯಬೇಕಿದ್ದು, ಇನ್ನೊಂದು ತಿಂಗಳಲ್ಲಿ ಎಲ್ಲವೂ ಪಕ್ಕಾ ಆಗಿ, “ಬೀರ್‌ಬಲ್’ ಟ್ರಯಾಲಜಿಯ ಮೊದಲ ಚಿತ್ರವಾದ “ಫೈಂಡಿಂಗ್ ವಜ್ರಮುನಿ’ ಶುರುವಾಗಲಿದೆಯಂತೆ.