Advertisement

ಶೃಂಗೇರಿ ಶಾರದಾಪೀಠದಲ್ಲಿ ಲಕ್ಷ ದೀಪೋತ್ಸವ

06:25 AM Nov 25, 2018 | Team Udayavani |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ಹಾಗೂ ತೆಪ್ಪೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕಾರ್ತಿಕ ಶುದ್ಧ ಹುಣ್ಣಿಮೆಯ ದಿನ ಶ್ರೀ ಸ್ತಂಭಗಣಪತಿ, ಶ್ರೀಮಲಹಾನಿಕರೇಶ್ವರಸ್ವಾಮಿ, ಶ್ರೀಭವಾನಿ ಅಮ್ಮನವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ನೆರವೇರಿಸಲಾಯಿತು. ಬಳಿಕ ಪರಕಾಳಿಯನ್ನು ದಹಿಸಲಾಯಿತು.

Advertisement

ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಮೊದಲ ದೀಪ ಬೆಳಗಿಸಿ ದಿಪೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಮಠದಲ್ಲಿ ಶ್ರೀ ಶಾರದಾಂಬಾ ಬಂಗಾರದ ರಥೋತ್ಸವ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆಗಳು ನಡೆದವು. ಬಳಿಕ ಶ್ರೀ ಶಾರದಾಂಬೆ, ಶ್ರೀ ಭವಾನಿಯಮ್ಮ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ವಿದ್ಯಾಶಂಕರ, ಶ್ರೀ ಶಂಕರಾಚಾರ್ಯರ ಉತ್ಸವ ಮೂರ್ತಿಗಳ ವಿಜೃಂಭಣೆಯ ತೆಪ್ಪೋತ್ಸವ ತುಂಗಾನದಿಯಲ್ಲಿ ನಡೆಯಿತು. ಶ್ರೀ ಮಠದ ಪುರೋಹಿತರು ತೆಪ್ಪೋತ್ಸವದಲ್ಲಿ ಪೂಜೆ ನೆರವೇರಿಸಿದರು. ಈ ವೇಳೆ ಋತ್ವಿಜರು ತುಂಗೆಗೆ ಆರತಿ ಬೆಳಗಿದರು. ಸುಮಂಗಲಿಯರು ತುಂಗೆಗೆ ಬಾಗಿನ ಸಮರ್ಪಿಸಿದರು. ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗಿಯಾದರು.

ದೀಪೋತ್ಸವದ ಅಂಗವಾಗಿ ಮಠದ ಆವರಣದಲ್ಲಿ ಬಿಡಿಸಿದ್ದ ಬೃಹತ್‌ ರಂಗೋಲಿ ಜನಮನ ಸೆಳೆಯಿತು. ಶ್ರೀ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ಶಂಕರ ಚರಿತ್ರಾಮೃತ ನೃತ್ಯರೂಪಕ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next