Advertisement
ಸ್ವಾಮೀಜಿಯವರು ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಪ್ರಥಮ ಬಾರಿಗೆ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಆಶೀರ್ವಚನ ನೀಡಿದರು.
Related Articles
Advertisement
ನಾವು ಚೆನ್ನಾಗಿರಬೇಕಾದರೆ ದೇವಸ್ಥಾನವೂ ಚೆನ್ನಾಗಿರಬೇಕು. ಪೂಜೆ, ಉತ್ಸವಾದಿಗಳು ಕಾಲಕಾಲದಲ್ಲಿ ನಡೆಯುತ್ತಿರಬೇಕು. ದೇವಸ್ಥಾನವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದೀರಿ. ದೇವತೆಗಳ ಪ್ರಾರ್ಥನೆಯಂತೆ ಜಗತ್ತಿನ ಕ್ಷೇಮಕ್ಕಾಗಿ ಮಹಿಷಾಸುರನನ್ನು ಸಂಹರಿಸಿದ ದೇವಿರೂಪವಿಲ್ಲಿ ಪೂಜೆಗೊಳ್ಳುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
ಶೃಂಗೇರಿಯಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿದ ಶ್ರೀಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ರಕ್ಷಣೆಗಾಗಿ ದೇವಿ ಸನ್ನಿಧಾನವನ್ನು ಪ್ರತಿಷ್ಠಾಪಿಸಿದರು. ಅದರಲ್ಲಿ ಒಂದು ದುರ್ಗಾಂಬಾ ದೇವಾಲಯ. ಅರ್ಜುನನೂ ಮಹಾಭಾರತ ಯುದ್ಧದ ಮುನ್ನ ಕೃಷ್ಣನ ಸಲಹೆಯಂತೆ ದುರ್ಗಾಂಬೆಯ ತಪಸ್ಸು ಮಾಡಿ ಅನುಗ್ರಹ ಸಂಪಾದಿಸಿದ್ದ ಎಂದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ಅವರು ಗೌರವ ಸಲ್ಲಿಸಿ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ, ಶಾಸಕ ಕೆ.ರಘುಪತಿ ಭಟ್, ನಗರಸಭೆ ಸದಸ್ಯೆ ಗೀತಾ ಶೇಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆ, ಪ್ರಧಾನ ಅರ್ಚಕ ರತ್ನಾಕರ ಉಪಾಧ್ಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಮೇಶ್ ಶೇರಿಗಾರ್, ಮಂಜುನಾಥ್ ಹೆಬ್ಬಾರ್, ಶ್ರೀಮತಿ ಸಂಧ್ಯಾ ಪ್ರಭು, ಕಿಶೋರ್ ಸಾಲಿಯಾನ್, ಅರ್ಚಕರು, ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ಕಡಿಯಾಳಿ ದೇವಿಗೆ ಸ್ವಾಮೀಜಿಯವರು ಬೆಳ್ಳಿ ಕಾಲುದೀಪವನ್ನು ಸಮರ್ಪಿಸಿದರು. ಶುಕ್ರವಾರದ ದೇವಿಯ ಅಲಂಕಾರಕ್ಕಾಗಿ ಸೀರೆಯನ್ನು ಹಿಂದಿನ ದಿನ ಕಳುಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಕ್ತರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.