ಶೃಂಗೇರಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸರಕಾರದಿಂದ ಬರುತ್ತಿದ್ದ ಮಾಸಾಶನ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡು ಫಲಾನುಭವಿಗಳು ಪರದಾಡುವಂತಾಗಿದೆ.
ಯೋಜನೆಯಡಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಶೇಷ ಚೇತನರು ಸಹಿತ ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಪಿಂಚಣಿ ಬರುತ್ತಿದ್ದ ಅನೇಕರಿಗೆ ಇದೀಗ ಕಳೆದ ಒಂದು ವರ್ಷದಿಂದ ಪಿಂಚಣಿ ಬಾರದೇ ಅದನ್ನೇ ನಂಬಿಕೊಂಡಿದ್ದ ವೃದ್ಧರು, ವಿಧವೆಯರು, ವಿಶೇಷ ಚೇತನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಔಷಧಿ, ಮಾತ್ರೆ ಖರೀದಿಸಲು ಮಾಸಾಶನ ನಂಬಿಕೊಂಡಿದ್ದವರು ಇದೀಗ ತೊಂದರೆಗೆ ಒಳಗಾಗಿದ್ದಾರೆ.
ವಿವಿಧ ಯೋಜನೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು, ಬ್ಯಾಂಕಿನ ಹೆಸರು ಬದಲಾಗಿದ್ದು, ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸಂಖ್ಯೆ ಬದಲಾಗಿರುವುದರಿಂದ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದ ಪಿಂಚಣಿ ಸ್ಥಗಿತಗೊಂಡಿದೆ. ಕಳೆದ ನಾಲ್ಕು ತಿಂಗಳಿಂದ ನೂರಾರು ಫಲಾನುಭವಿಗಳಿಗೆ ಪಿಂಚಣಿ ಲಭ್ಯವಾಗುತ್ತಿಲ್ಲ.
ಸಾಮಾಜಿಕ ಭದ್ರತಾ ಯೋಜನೆಯಡಿ ತಾಂತ್ರಿಕ ಕಾರಣದಿಂದ ಕೆಲವು ಫಲಾನುಭವಿಗಳಿಗೆ ಪಿಂಚಣಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಡಿಸಿ ಕಚೇರಿಗೆ ಕಳೆದ ಅಕ್ಟೋಬರ್, ಫೆಬ್ರವರಿ ಮತ್ತು ಇತ್ತೀಚೆಗೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ. 32 ಫಲಾನುಭವಿಗಳ ಪಿಂಚಣಿ ಸಮಸ್ಯೆ ಇದ್ದು, ಅದರಲ್ಲಿ 15 ಫಲಾನುಭವಿಗಳಿಗೆ ಈಗ ಪಿಂಚಣಿ ಬರುತ್ತಿದೆ. 17 ಫಲಾನುಭವಿಗಳ ಪಿಂಚಣಿ ಇನ್ನೂ ಬಂದಿಲ್ಲ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಶಿವರಾಂ,
ಶಿರಸ್ತೆದಾರ, ಶೃಂಗೇರಿ
ವಿಧವಾ ವೇತನ ಪಡೆಯುತ್ತಿದ್ದ ನನಗೆ ಸಮೀಪದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು. ಕಳೆದ ನಾಲ್ಕೈದು ತಿಂಗಳಿಂದ ಪಿಂಚಣಿ ಬರುತ್ತಿಲ್ಲ. ಬ್ಯಾಂಕಿನಲ್ಲಿ ಕೇಳಿದರೆ ಶೀಘ್ರವೇ ಬರುತ್ತದೆ ಎಂದು ಹೇಳುತ್ತಿದ್ದಾರೆ. ಸರಕಾರ ಪಿಂಚಣಿಯನ್ನು ಬರುವಂತೆ ಮಾಡಬೇಕು.
ಸುಶೀಲ,
ಮೆಣಸೆ, ಶೃಂಗೇರಿ
ಸರಕಾರದಿಂದ ಹಲವಾರು ವರ್ಷದಿಂದ ಪಿಂಚಣಿ ಪಡೆಯುತ್ತಿದ್ದೆ. ಅಂಚೆ ಮೂಲಕ ಮನೆ ಬಾಗಿಲಿಗೆ ಬರುತ್ತಿದ್ದ ಪಿಂಚಣಿ, 2019 ಏಪ್ರಿಲ್‌ನಿಂದ ಸ್ಥಗಿತಗೊಂಡಿದ್ದು,ಅತ್ಯಗತ್ಯ ಔಷಧಿ, ಮಾತ್ರೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪಿಂಚಣಿ ಮತ್ತೆ ಪಡೆಯಲು ಹರ ಸಾಹಸ ಪಟ್ಟರೂ, ತಾಲೂಕು ಕಚೇರಿಗೆ ಹತ್ತಾರು ಸಾರಿ ಅಲೆದಾಡಿ, ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದರೂ, ಪಿಂಚಣಿ ಮಾತ್ರ ಬರುತ್ತಿಲ್ಲ. ಜಿಲ್ಲಾಧಿಕಾರಿಗಳು ನನ್ನ ಕಷ್ಟಕ್ಕೆ ಸ್ಪಂದಿಸಿ, ಮತ್ತೆ ಪಿಂಚಣಿ ಲಭ್ಯವಾಗುವಂತೆ ಮಾಡಲಿ.
ಗಂಗಮ್ಮ,
ಕೊರಡಕಲ್ಲು, ಶೃಂಗೇರಿ