ಶೃಂಗೇರಿ: ತಾಲೂಕಿನ ಕೂತಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಮೂಲಕ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. 2011ರ ಜನಗಣತಿಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2458 ಜನಸಂಖ್ಯೆ ಇದ್ದು, ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಇದೆ. ಶೇ.90 ರಷ್ಟು ಸಾಕ್ಷರತೆಯನ್ನು ಹೊಂದಿದ ಕೂತುಗೋಡಿನ ಸಾಕಷ್ಟು ಜನರು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಬೆಟ್ಟಗೆರೆ, ವೈಕುಂಠಪುರ, ಕೊಚ್ಚವಳ್ಳಿ, ಕೂತುಗೋಡು, ಗುಂಡ್ರೆ 5 ಕಂದಾಯ ಗ್ರಾಮಗಳನ್ನು ಕೂತುಗೋಡು ಗ್ರಾಮ ಪಂಚಾಯಿತಿ ಹೊಂದಿದೆ. 5 ಗ್ರಾಮಗಳಲ್ಲಿ 55ಕ್ಕೂ ಮಿಗಿಲಾಗಿ ಹಳ್ಳಿಗಳಿವೆ. ಸ್ವಚ್ಛತೆ ಹಾಗೂ ಶಿಸ್ತನ್ನು ಗ್ರಾಪಂ ಅಳವಡಿಸಿಕೊಂಡಿದೆ. ಕಚೇರಿಯಲ್ಲಿರುವ ಸೂಚನಾ ಫಲಕದಲ್ಲಿ ಸರಕಾರದಿಂದ ಬಂದ ಆದೇಶಗಳನ್ನು ಕ್ರಮವಾಗಿ ಜೋಡಿಸಿಡಲಾಗಿದೆ. ಬಯಲು ಮಲ ವಿಸರ್ಜನೆ ಅನಾಗರೀಕತೆಯ ಲಕ್ಷಣ, ಶೌಚಾಲಯ ನಿರ್ಮಿಸಿ ಬಳಸುವುದೇ ನಾಗರೀಕತೆಯ ಲಕ್ಷಣ ಎಂಬ ನಾಮಫಲಕವಿದೆ.
ಕೂತುಗೋಡು ಗ್ರಾಪಂನಲ್ಲಿ ನಾಗೇಶ್ ಹೆಗ್ಡೆ ಕೊಚ್ಚವಳ್ಳಿ(ಅಧ್ಯಕ್ಷ), ಚಂದ್ರಾವತಿ ಸುರೇಶ್ (ಉಪಾಧ್ಯಕ್ಷೆ), ಗಾಯಿತ್ರಿ ನಾಗೇಶ್, ಪ್ರಮೋದಿನಿ ಎಲ್ಲಪ್ಪ, ನಾರಯಣ್, ಪ್ರೇಮ್ ಕುಮಾರ್, ಪ್ರೇಮ ಚಂದ್ರಶೇಖರ್ (ಸದಸ್ಯರು). ನರೇಗಾ ಯೋಜನೆಯ ವಿವರ- 2018-19ರಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗಾಗಿ 13.64 ಲಕ್ಷ ರೂ.ಅನುದಾನ ವಿನಿಯೋಗಿಸಲಾಗಿದೆ. ಶೌಚಾಲಯ, ವಿವಿಧ ವಸತಿ ಯೋಜನೆಗೆ ಅನುದಾನ, ಕಾಂಕ್ರೀಟ್ ರಸ್ತೆ, ಸಾರ್ವಜನಿಕರಿಗಾಗಿ ಬಾವಿ, ದನದ ಕೊಟ್ಟಿಗೆ, ಕಾಲುಸಂಕ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿದ ಕೀರ್ತಿಗೆ ಕೂತುಗೋಡು ಗ್ರಾಪಂ ಪಾತ್ರವಾಗಿದೆ.
ಭ್ರಷ್ಟಾಚಾರ ತಾಂಡವಾಡುವ ಈ ಕಾಲದಲ್ಲಿ ಗ್ರಾಪಂ ಆಡಳಿತ ಪಾರದರ್ಶಕತೆ ಕಾಯ್ದುಕೊಂಡಿದೆ. ಸಾಮಾನ್ಯ, ವಾರ್ಡು, ಗ್ರಾಮ ಸಭೆಗಳನ್ನು ನಿಗದಿತ ಸಮಯದಲ್ಲಿ ಮಾಡಿ ಜನಸಾಮಾನ್ಯರ ಸಮಸ್ಯೆಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಭಿವೃದ್ಧಿ ಕಾರ್ಯದಲ್ಲಿ ಸರಕಾರದ ಆದೇಶದಂತೆ ಅನುದಾನವನ್ನು ಸಮರ್ಪಕವಾಗಿ ಜನಪ್ರತಿನಿಧಿ ಗಳು ತ್ಯಂತ ವಿವೇಚನೆಯಿಂದ ಬಳಸುತ್ತಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿ ಹಳ್ಳಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಿದ ಖ್ಯಾತಿಯ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಪಂಚತಂತ್ರ, ಗಾಂಧೀ ಸಾಕ್ಷಿ ತಂತ್ರಾಂಶದಲ್ಲಿ ಅಳವಡಿಸಿರುವುದು, ಕಾಯಕ, ನರೇಗಾ, ಸಕಾಲ ಯೋಜನೆಯಡಿ ಗ್ರಾಮಸ್ಥರಿಗೆ ಸ್ಪಂದನೆ, ಸರಕಾರದ ಎಲ್ಲಾ ಯೋಜನೆಗಳ ಅನುಷ್ಠಾನ ಹಾಗೂ ದಾಖಲೆಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆರ್.ಪಿ.ಅಮೀರ್ ಸುಹಿಲ್, ಕಾರ್ಯದರ್ಶಿ ಅನ್ನಪೂರ್ಣಾ ಹಾಗೂ ಸಿಬ್ಬಂದಿ ನಿರಂತರ ಶ್ರಮ ಗಮನಾರ್ಹವಾಗಿದೆ.