Advertisement

ದಶಕ ಕಳೆದರೂ ಸಿಗಲಿಲ್ಲ ನಿವೇಶನ!

12:41 PM Dec 07, 2019 | Naveen |

„ರಮೇಶ್‌ ಕರುವಾನೆ
ಶೃಂಗೇರಿ:
ಕರ್ನಾಟಕ ಗೃಹ ಮಂಡಳಿಗೆ 10 ವರ್ಷಗಳ ಹಿಂದೆ ತಾಲೂಕಿನ ನೂರಾರು ವಸತಿರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದುವರೆಗೂ ನಿವೇಶನವೂ ಇಲ್ಲ, ಇತ್ತ ಕಟ್ಟಿದ ಹಣವೂ ವಾಪಸಾಗದೇ ತಲೆ ಮೇಲೆ ಕೈ ಹೊತ್ತು ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೆಂಗಳೂರಿನ ಕರ್ನಾಟಕ ಗೃಹ ಮಂಡಳಿ 2009ರಲ್ಲಿ ಹುಡ್ಕೋ ಯೋಜನೆಯಡಿ ನಿವೇಶನಕ್ಕೆ ಜಾಗ ನೀಡುವುದಾಗಿ ಅರ್ಜಿ ಆಹ್ವಾನಿಸಿತ್ತು. ಆಗ, ನಾ ಮುಂದು ತಾ ಮುಂದು ಎಂದು ನಿವೇಶನ ರಹಿತರು ನಮಗೆ ನಿವೇಶನ ದೊರಕೀತು ಎಂಬ ಮಹದಾಸೆಯಿಂದ ಕೂಡಲೇ ಗೃಹ ಮಂಡಳಿಗೆ ಹಣ ಕಟ್ಟಿ ಹೆಸರು ನೋಂದಾಯಿಸಿದ್ದರು. ಆದರೆ, ಇದುವರೆಗೂ ಏನೂ ದೊರಕದೇ ನಿವೇಶನ ರಹಿತರು ಚಿಂತೆಗೀಡಾಗಿದ್ದಾರೆ. ತಾಲೂಕಿನ ಮಧ್ಯಮ ವರ್ಗದ ಜನತೆ ಮಾತ್ರವಲ್ಲದೇ ಸ್ವಂತ ನಿವೇಶನ ಹೊಂದಿರದ ಸಾಮಾನ್ಯ ಜನತೆಗೆ ಆಶಾಕಿರಣದಂತೆ ಗೊಚರಿಸಿತ್ತು. ಗೃಹ ಮಂಡಳಿಯಿಂದ ಹುಡ್ಕೋ ಯೋಜನೆಯಡಿ ಸುಲಭದ ದರದಲ್ಲಿ ನಿವೇಶನ ದೊರಕುವುದೆಂದು ಅಂದಾಜಿಸಲಾಗಿತ್ತು. ಇದಕ್ಕಾಗಿ ಗೃಹ ಮಂಡಳಿ ತಾಲೂಕಿನ ಮೆಣಸೆ ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕಾರು ಎಕರೆ ಭೂಮಿಯನ್ನು ಗುರುತಿಸಿ ಅಳತೆಯನ್ನೂ ಮಾಡಿತ್ತು. ಮಸಿಗೆ ಗ್ರಾಮದ ಮಾದಲಕುಡಿಗೆ, ಕಿರುಕೋಡು, ಕೊರಡಕಲ್ಲು, ಮೂಡಬನದ ಬಳಿ ಹುಡ್ಕೋ ಕಾಲೋನಿಗಾಗಿ ಜಾಗವನ್ನು ಗುರುತಿಸಲಾಗಿತ್ತು. ಇದನ್ನು ಅರಿತ ನೂರಾರು ನಿವೇಶನ ರಹಿತರು ಈ ಯೋಜನೆ‌ಯಡಿ ಸ್ವಂತ ಜಾಗ ಸ್ವಂತ ಮನೆಯ ಕನಸು ಕಟ್ಟಿಕೊಂಡು ಹುಡ್ಕೋ ನಿರ್ಧರಿಸಿದ ಹಣವನ್ನು ಕಟ್ಟಲು ಮುಂದಾದರು.

ತಲಾ 1,000ರೂ., 2,000ರೂ., 3,000ರೂ., 5,000ರೂ. ಆಯ ನಿಗದಿತ ಅಳತೆಯ ಜಾಗದ ನಿರ್ಧರಿತ ಹಣವನ್ನು ಅರ್ಜಿಯೊಂದಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ನಿಗದಿತ ಮೊತ್ತವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಯ ಮೂಲಕ ನಿವೇಶನ ರಹಿತರು ಜಮಾ ಮಾಡಿದ್ದರು. ನಿವೇಶನ ರಹಿತರಿಂದ ಕೋಟ್ಯಂತರ ರೂ. ಸಂಗ್ರಹಿಸಲಾಗಿತ್ತು. ಆನಂತರ ಇಲ್ಲಿಯವರೆಗೂ ಗೃಹ ಮಂಡಳಿಯಿಂದ ನಿವೇಶನದ ಬಗ್ಗೆ ಸೂಕ್ತ ಮಾಹಿತಿ ದೊರಕಿಲ್ಲ. ಗೃಹ ಮಂಡಳಿಯವರನ್ನು ವಿಚಾರಿಸಿದಾಗ, ಇನ್ನೂ ಕಂದಾಯ ಭೂಮಿ ದೊರಕಿಲ್ಲ. ಸ್ಥಳವನ್ನು ಗುರುತಿಸಿ ಮುಂದಿನ ದಿನಗಳಲ್ಲಿ
ಪರಿಶೀಲಿಸಲಾಗುವುದು. ಹೀಗೆ ಅನೇಕ ಕಾರಣಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ.

ದಶಕ ಕಳೆದರೂ ಗೃಹ ಮಂಡಳಿಯವರು ನಿವೇಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕಟ್ಟಿದ ಹಣವನ್ನೂ ನೀಡದೆ ಗ್ರಾಹಕರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹುಡ್ಕೋ ಯೋಜನೆಯಡಿ ಗ್ರಾಹಕರಿಗೆ ಯಾವುದೇ ನಿವೇಶನ ನೀಡದೆ, ಸೂಕ್ತ ಮಾಹಿತಿಯನ್ನೂ ನೀಡದೆ ಸಾರ್ವಜನಿಕರನ್ನು ಕತ್ತಲಲ್ಲಿ ಇಡುವ ಪ್ರಯತ್ನ ನಡೆದಿದೆ. ಇಂದು- ನಾಳೆ ನಿವೇಶನ ದೊರಕಬಹುದು ಎಂಬ ಆಸೆಯಿಂದ ದಿನ ದೂಡುತ್ತಿದ್ದ ಗ್ರಾಹಕರು ಇದೀಗ ಗೃಹ ಮಂಡಳಿಯವರು ಕೋಟ್ಯಂತರ ರೂ. ದೋಚಿ ಹಗಲು ದರೋಡೆ ಮಾಡಿದ್ದಾರೆ. ಈ ರೀತಿ ಮೋಸ ಮಾಡುವುದು ಸಮಂಜಸವಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯಲ್ಲಿ ಜಾಗದ ಕೊರತೆ ಇದ್ದು, ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಲ್ಲ. ಸ್ಥಳಕ್ಕಾಗಿ ಹುಡುಕಾಟ ಮುಂದುವರೆಸಲಾಗಿದೆ. ಈ ಹಿಂದೆ ಡಿಮಾಂಡ್‌ ಸರ್ವೆ ಮಾಡಿದ್ದು, ಅದಿನ್ನೂ ಅಂತಿಮವಾಗಿಲ್ಲ. ಜಾಗ ದೊರೆತ ಕೂಡಲೇ ಠೇವಣಿ ಕಟ್ಟಲು ತಿಳಿಸಲಾಗುವುದು.
.ಹರೀಶ್‌, ಎಇಇ ಕರ್ನಾಟಕ ಹೌಸಿಂಗ್‌
ಬೋರ್ಡ್‌, ಚಿಕ್ಕಮಗಳೂರು

Advertisement

ನಾನು ಹುಡ್ಕೋ ನಿವೇಶನಕ್ಕಾಗಿ ಹಣ ನೀಡಿದ್ದು, 10ವರ್ಷವಾದರೂ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಧಿಕೃತವಾಗಿ ಹಣ ಪಡೆದು ಈ ರೀತಿ ಪಂಗನಾಮ ಹಾಕಿಸಿಕೊಂಡಿದ್ದರೂ ನಮಗೆ ಏನೂ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡಳಿಯವರು ನಾವು ನೀಡಿದ ಹಣವನ್ನು ವಾಪಸ್‌ ನೀಡಲಿ.
.ಮಕ್ಕಿಮನೆ ಜೈರಾಂ

2009ರಲ್ಲಿ ಗೃಹ ಮಂಡಳಿಯಿಂದ ಅರ್ಜಿ ಆಹ್ವಾನದ ಮೇರೆಗೆ ನಿವೇಶನಕ್ಕಾಗಿ ಠೇವಣಿ ನೀಡಿದ್ದು, ಇದುವರೆಗೂ ನಮಗೆ ನಿವೇಶನ ದೊರಕಿಲ್ಲ. ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸುವ ಗೃಹ ಮಂಡಳಿಯವರು ಕೂಡಲೇ ನಿವೇಶನ ರಹಿತರಿಗೆ ನ್ಯಾಯ ಒದಗಿಸಬೇಕಿದೆ.
.ನೇರಳ ಕೊಡಿಗೆ ಕೃಷ್ಣಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next