ರಮೇಶ ಕರುವಾನೆ
ಶೃಂಗೇರಿ: ಸುತ್ತಲೂ ಬೆಳೆದಿರುವ ಪೊದೆ, ಗಿಡಗಂಟಿಗಳಿಂದ ಕೂಡಿದ ಆಶ್ರಯ ಮನೆಯಂತಿರುವ ಕೊಠಡಿಗಳು ಒಂದು ರೀತಿಯಲ್ಲಿ ಭೂತಬಂಗಲೆಯಂತಿರುವ ಕಟ್ಟಡ. ಇದು ಬೇರೆನಲ್ಲ ಪಟ್ಟಣದ ಹೊರವಲಯದ ಹನುಮಂತನಗರದಲ್ಲಿರುವ ಅರಣ್ಯ ಇಲಾಖಾ ಕಚೇರಿಯ ಕಟ್ಟಡದ ಸ್ಥಿತಿಗತಿ. ತಾಲೂಕಿನಲ್ಲಿ ಪ್ರಮುಖ ಇಲಾಖಾ ಕಚೇರಿಗಳಾದ ಕಂದಾಯ, ಪೊಲೀಸ್ ಇಲಾಖಾ ಕಚೇರಿಗಳು ಈಗಾಗಲೇ ಮೇಲ್ದರ್ಜೆಗೇರಿದೆ. ಆದರೆ ಅರಣ್ಯ ಇಲಾಖಾ ಕಚೇರಿ ಮಾತ್ರಾ ಆಶ್ರಯ ಮನೆಯ ಗುಡಿಸಲಿನಂತಿದೆ. ಸರ್ಕಾರ ಇದುವರೆಗೂ ಇಂತಹ ಪ್ರಮುಖ ಕಚೇರಿಯನ್ನು ಮೇಲ್ದರ್ಜೆಗೆ ಏರಿಸದೆ ಹಾಗೆಯೇ ಬಿಟ್ಟಿರುವುದು ಅಚ್ಚರಿ ತಂದಿದೆ.
ಕಳೆದ 2 ದಶಕಗಳ ಹಿಂದೆ ಪಟ್ಟಣದ ಹರಿಹರ ಬೀದಿಯಲ್ಲಿ ಅರಣ್ಯ ಇಲಾಖಾ ಕಚೇರಿ ಇತ್ತು. ಕಿಷ್ಕಿಂದೆಯಾಗಿದ್ದ ಕೊಠಡಿಗಳು ಸಮರ್ಪಕ ಗೋದಾಮು ವ್ಯವಸ್ಥೆ ಇಲ್ಲದೆ ಇರುವುದರಿಂದ ಪಟ್ಟಣದ ಹೊರವಲಯದ ಹನುಮಂತನಗರಕ್ಕೆ ಅರಣ್ಯ ಇಲಾಖಾ ಕಚೇರಿ ಸ್ಥಳಾಂತರಗೊಂಡಿತು. ಆದರೆ ಇದುವರೆಗೂ ಇಲಾಖಾ ಕಚೇರಿ ಮೇಲ್ದರ್ಜೆಗೇರದೆ ಸಮರ್ಪಕ ನಿರ್ವಹಣೆ ಇಲ್ಲದೆ ಕಟ್ಟಡ ಪಾಳುಬಿದ್ದ ಬಂಗಲೆಯಂತಿದೆ. ಸೂಕ್ತ ನಿರ್ವಹಣೆಯಿಲ್ಲದ ಹಳೆಯ ಕಟ್ಟಡ ಭೂತ ಬಂಗಲೆಯಂತಾಗಿದೆ. ಕಟ್ಟಡದ ಮೇಲ್ಚಾವಣಿ ಹೆಂಚುಗಳು ಅಲ್ಲಲ್ಲಿ ಜಖಂಗೊಂಡಿದ್ದು, ವಿದ್ಯುತ್ ಸಂಪರ್ಕದ ವೈರುಗಳು ಜೋತು ಬಿದ್ದಿದ್ದು, ಯಾವ ಸಮಯದಲ್ಲಾದರು ಶಾರ್ಟ್ ಸರ್ಕ್ನೂಟ್‌ನಿಂದ ಅಪಾಯ ಒದಗುವ ಸಂಭವವೇ ಹೆಚ್ಚಾಗಿದೆ.
ಮಳೆಗಾಲದ ಸಮಯದಲ್ಲಿ ಕೊಠಡಿಯ ಒಳಗೆ ನೀರು ತೊಟ್ಟಿಕ್ಕಿ ಕಡತಗಳು ನಾಶವಾಗುವ ಸಂಭವ. ಒಪ್ಪವಾಗಿ ಜೋಡಿಸಿಡಲು ಸೂಕ್ತ ಪೀಠೊಪಕರಣಗಳಿಲ್ಲ. ಸರ್ಕಾರಕ್ಕೆ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೂಡ ಹೊಸ ಕಟ್ಟಡದ ಭಾಗ್ಯ ಇನ್ನೂ ದೊರಕಿಲ್ಲ. ಇಲ್ಲಿನ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ಕೆಲಸಗಳು ಸುಸೂತ್ರವಾಗದೆ ದಿನವಿಡೀ ಕಚೇರಿಯಲ್ಲಿ ಕಳೆಯುವಂತಾದ ಸಂದರ್ಭದಲ್ಲಿ ಕ್ಯಾಂಟೀನ್, ಹೋಟೆಲ್‌ಗಳಿಲ್ಲದೆ ಪರದಾಡುವ ಸ್ಥಿತಿ ಇದೆ. ಇನ್ನು ಜೆರಾಕ್ಸ್, ಡಿ.ಟಿ.ಪಿ ಸೆಂಟರ್, ಸ್ಟೇಷನರಿ ಅಂಗಡಿಗಳು ಕಚೇರಿ ಸಮೀಪವಿಲ್ಲದೆ ಸಾರ್ವಜನಿಕರು ಪಟ್ಟಣಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಕಳ್ಳ ಕಾಕರಿಂದ ವಶಪಡಿಸಿಕೊಂಡ ಮರದ ದಿಮ್ಮಿ ನಾಟ ಸಂರಕ್ಷಣೆಗೆ ಗೋದಾಮು ವ್ಯವಸ್ಥೆಯಲ್ಲಿ ಜತೆಗೆ ಸೌದೆ ಡಿಪೋಗೆ ಸೂಕ್ತ ಗೋದಾಮು ಇಲ್ಲದೆ ಸೌದೆ, ನಾಟಮರಗಳು ಬೆಲೆಬಾಳುವ ನಂದಿ, ಬೀಟೆ, ಹಲಸು, ಸಾಗುವಾನಿ, ಹೆಬ್ಬಲಸು, ಅಕೇಶಿಯ ಮುಂತಾದ ಮರಗಳ ತುಂಡುಗಳಿವೆ. ಇವುಗಳು ನಾಶವಾಗುವ ಸಂಭವವೇ ಹೆಚ್ಚು. ಇಲಾಖಾ ಕಚೇರಿ ಪಕ್ಕದಲ್ಲಿರುವ ವಾಹನದ ಪಾರ್ಕಿಂಗ್ ಶೆಡ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಶೆಡ್‌ನ ಹೆಂಚುಗಳು ಅಲ್ಲಲ್ಲಿ ಒಡೆದಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ವಾಹನ ಬಿಸಿಲು ಮಳೆಯಲ್ಲೇ ನಿಲ್ಲುವ ಸ್ಥಿತಿ. ಕಚೇರಿ ಸುತ್ತಮುತ್ತ ಸಿಬ್ಬಂದಿ ವಸತಿಗೃಹಗಳಿದ್ದರು ವಾಸಕ್ಕೆ ಮಾತ್ರ ಯೋಗ್ಯವಾಗಿಲ್ಲ.
ಸರ್ಕಾರ ತಾಲೂಕು ಕಚೇರಿ, ಪೊಲೀಸ್ ಠಾಣೆ ಕಚೇರಿಗಳನ್ನು ಮೇಲ್ದರ್ಜೆಗೆ ಏರಿಸಿದಂತೆ ಅರಣ್ಯ ಇಲಾಖಾ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.