ಶೃಂಗೇರಿ: ಇತ್ತೀಚಿನ ವರ್ಷದಲ್ಲಿ ಜನಪ್ರಿಯವಾಗಿದ್ದ ಎಫ್‌ಎಂ ರೈನ್‌ಬೋ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಇಲ್ಲಿನ ಆಕಾಶವಾಣಿ ಮರು ಪ್ರಸಾರ ಕೇಂದ್ರ, ಅರ್ಥವೇ ಆಗದ ರಾಂಚಿ ಕೇಂದ್ರದ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಕೇಳುಗರಿಗೆ ತೀವ್ರ ನಿರಾಸೆ ಮೂಡಿಸಿದೆ.
Advertisement
ಮಲೆನಾಡಿನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಮನೋರಂಜನೆಗಿರುವ ಏಕೈಕ ವಸ್ತು ಆಕಾಶವಾಣಿಯಾಗಿದೆ. ಮೀಡಿಯಂ ವೇವ್ ತರಂಗಾಂತರದ ಭದ್ರಾವತಿ, ಮಂಗಳೂರು ಮತ್ತಿತರ ನಿಲಯಗಳು ಈಗ ಸ್ಪಷ್ಟವಾಗಿ ಕೇಳದೇ ಇರುವುದರಿಂದ ಸ್ವಾಭಾವಿಕವಾಗಿ ರೈನ್‌ಬೋ ಕೇಳುಗರ ಸಂಖ್ಯೆ ವೃದ್ಧಿಸಿದೆ. ಪ್ರತಿ ದಿನ ಶೃಂಗೇರಿಯಿಂದ ಕರೆ ಮಾಡುತ್ತಿದ್ದ ಶ್ರೋತೃಗಳು ಇದ್ದರು. ಪ್ರಶ್ನೋತ್ತರ, ಇಷ್ಟವಾದ ಚಲನಚಿತ್ರ ಗೀತೆ ಮತ್ತಿತರ ಕಾರ್ಯಕ್ರಮಕ್ಕೆ ಪ್ರತಿದಿನ ಈ ಭಾಗದ ಒಂದಷ್ಟು ಶ್ರೋತೃಗಳು ಇದ್ದರೆ, ಪ್ರತಿ ದಿನವೂ ಆಲಿಸುತ್ತಿದ್ದ ಶ್ರೋತೃಗಳು ಸಾಕಷ್ಟು ಇದ್ದರು ಎಂಬುದು ಗಮನಾರ್ಹ.
Related Articles
ಈ ಬಗ್ಗೆ ಅರಿವು ಸಹ ಇದ್ದಂತಿಲ್ಲ. ಆದರೂ, ರಾಜ್ಯದ ಲಕ್ಷಾಂತರ ಎಫ್‌ಎಂ ಕೇಳುಗರಿಗಂತೂ ಅನ್ಯಾಯವಾಗಿದೆ.
Advertisement
ದೂರದರ್ಶನ ಮರುಪ್ರಸಾರಕ್ಕಾಗಿ ಮಾರುತಿ ಬೆಟ್ಟದಲ್ಲಿ ಸ್ಥಾಪಿತವಾದ ಮರು ಪ್ರಸಾರ ಕೇಂದ್ರಕ್ಕೆ ಆಕಾಶವಾಣಿಯ ಎಫ್‌ಎಂ ರೈನ್‌ಬೋ ಮರು ಪ್ರಸಾರವನ್ನು ಸೇರ್ಪಡೆಗೊಳಿಸಲಾಗಿತ್ತು. ದೂರದರ್ಶನ ಮರುಪ್ರಸಾರ ಸ್ಥಗಿತಗೊಂಡರೂ ಪ್ರಸ್ತುತ ಆಕಾಶವಾಣಿ ಮರುಪ್ರಸಾರ ವ್ಯವಸ್ಥೆಯೂ ಇದೆ. ಕೇಂದ್ರದ ಮೇಲುಸ್ತುವಾರಿ ಕೊರತೆ, ಯುಪಿಎಸ್ ಇಲ್ಲದೇ ಕೆಲವೊಮ್ಮೆ ಹಲವು ದಿನಗಳ ಕಾಲ ಮತ್ತು ವಿದ್ಯುತ್ ನಿಲುಗಡೆ ಆಗುತ್ತಿದ್ದಂತೆ ಪ್ರಸಾರ ಸ್ಥಗಿತಗೊಳ್ಳುತ್ತಿತ್ತು.
ಈ ಬಗ್ಗೆ ಕೇಳುಗರು ಹಾಕಿದ ತೀವ್ರ ಒತ್ತಾಯ, ಒತ್ತಡದಿಂದಾಗಿ ಇವೆಲ್ಲವೂ ಈಗ ಸುಸ್ಥಿತಿಗೆ ಬಂದಿತು ಎನ್ನುವಾಗ ಹಠಾತ್ ಆಗಿ ರೈನ್‌ಬೋ 101.3 ಕನ್ನಡ ಕಾರ್ಯಕ್ರಮಕ್ಕೆ ಎತ್ತಂಗಡಿ ಮಾಡಿ, ಬೇರೆ ಯಾವುದೋ ಪರಭಾಷಾ ನಿಲಯದ ಕಾರ್ಯಕ್ರಮವನ್ನು ಈ ಕೇಂದ್ರಕ್ಕೆ ಜೋಡಿಸಿ, ಮರುಪ್ರಸಾರ ಮಾಡಲಾಗುತ್ತಿದೆ. ಇದರಿಂದ ಕೇಳುಗರು ನಿರಾಸೆಗೊಂಡಿದ್ದಾರೆ. ಈ ಕುರಿತು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ದೂರು ಸಲ್ಲಿಸಲು ಕ್ಷೇತ್ರದ ಸಂಸದರ ನೆರವನ್ನು ಯಾಚಿಸಲಾಗಿತ್ತು.
ಆದರೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ. ಬಂದರೂ ಮಾತಿಗೂ ಸಿಗುತ್ತಿಲ್ಲ ಎಂಬುದು ಆಕಾಶವಾಣಿ ಕೇಳುಗರ ದೂರಾಗಿದೆ. ಇನ್ನಾದರೂ ಸಂಸದರು ಈ ಸಮಸ್ಯೆಯನ್ನು ಗಮನಿಸಿ, ಆಕಾಶವಾಣಿಯ ಮುಖ್ಯಸ್ಥರಿಗೆ ಈ ಹಿಂದಿನಂತೆ ಎಫ್‌ಎಂ ರೈನ್‌ಬೋ 101.3 ಕಾರ್ಯಕ್ರಮವನ್ನು ಈ ಮರುಪ್ರಸಾರ ಕೇಂದ್ರಕ್ಕೆ ಜೋಡಿಸುವ ಕೆಲಸ ಮಾಡಬೇಕು ಎಂದು ಈ ಭಾಗದ ಶ್ರೋತೃಗಳು ಆಗ್ರಹಿಸಿದ್ದಾರೆ.