ಚಿಕ್ಕಮಗಳೂರು: ಶೃಂಗೇರಿ ಪೇಟೆಯಲ್ಲಿನ ಸ್ವಾಗತ ಗೋಪುರದ ಬಳಿಯಲ್ಲಿರುವ ಶ್ರೀ ಶಂಕರಾಚಾರ್ಯ ವೃತ್ತದಲ್ಲಿ ಸ್ಥಾಪಿಸಲಾಗಿರುವ ಜಗದ್ಗುರು ಆದಿ ಶಂಕರಾಚಾರ್ಯರ ಪ್ರತಿಮೆಗೆ ಕಿಡಿಗೇಡಿಗಳು ಅನ್ಯ ಧರ್ಮದ ಧ್ವಜವನ್ನು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೃಂಗೇರಿ ಶಾರದಾ ಮಠದ ಪರವಾಗಿ ಇದರ ಆಡಳಿತಾಧಿಕಾರಿ ಗೌರೀಶಂಕರ್ ಅವರು ಈ ದೂರನ್ನು ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಶೃಂಗೇರಿ ತಾಲೂಕಿನಲ್ಲಿ ಕೋಮು ಸಾಮರಸ್ಯವನ್ನು ಕದಡಲು ಸಂಚು ಹೂಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಘಟನೆಯಿಂದ ಶೃಂಗೇರಿ ಮಠದ ಗೌರವಕ್ಕೆ ಚ್ಯುತಿಯಾಗಿರುವುದರಿಂದ ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸದರಿ ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಶೃಂಗೇರಿಯ ಶಂಕರಾಚಾರ್ಯರರ ಪುತ್ಥಳಿ ಮೇಲೆ ಹಿಂದೂಯೇತರ ಬಾವುಟ!: ಪ್ರತಿಭಟನೆ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಇಂದು ಬೆಳಗ್ಗೆ ಮಾಜಿ ಸಚಿವ ಜೀವರಾಜ್ ಅವರು ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು
ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆಂಬ ಮಾಹಿತಿ ಲಭಿಸಿದೆ.