Advertisement

ಶೃಂಗೇರಿ ಶ್ರೀ ಶಾರದೆಗೆ ವೈಷ್ಣವಿ ಅಲಂಕಾರ

03:20 PM Oct 04, 2019 | Naveen |

ಶೃಂಗೇರಿ: ದಸರಾ ಉತ್ಸವ ಐದನೇ ದಿನವಾದ ಗುರುವಾರ ಆರಾಧ್ಯ ದೇವತೆ ಶ್ರೀ ಶಾರದೆಗೆ ಗರುಡವಾಹನ ಅಲಂಕಾರ (ವೈಷ್ಣವಿ) ಮಾಡಲಾಗಿತ್ತು. ತಾಯಿ ಶಾರದೆಯ ಕೈಯಲ್ಲಿ ಶಂಖ, ಚಕ್ರ, ಗಧೆ ಮೊದಲಾದ ಆಯುಧಗಳನ್ನು ಧರಿಸಿ, ಗರುಡಾರೂಢಳಾಗಿ, ವೈಷ್ಣವಿ ಅಲಂಕಾರದೊಂದಿಗೆ ಶ್ರೀ ಮಹಾ ವಿಷ್ಣುವಿನ ಶಕ್ತಿಯಾಗಿ ಭಕ್ತರನ್ನು ಅನುಗ್ರಹಿಸಿದಳು.

Advertisement

ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಬೆಳಗಿನ ನಿತ್ಯ ವಿಧಿಗಳನ್ನು ಪೂರೈಸಿದ ನಂತರ ಶಾರದಾಂಬಾ ದೇಗುಲಕ್ಕೆ ತೆರಳಿ ಜಗನ್ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಆಗಮಿಸಿದ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಎಲ್ಲಾ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಂಗಳಾರತಿ ಸ್ವೀಕರಿಸಿದರು. ನಂತರ ಶಾರದಾ ಸನ್ನಿಧಿಗೆ ತೆರಳಿ ಶ್ರೀ ಸೂಕ್ತ ಜಪ, ಭುವನೇಶ್ವರಿ ಜಪ, ಜಗನ್ಮಾತೆಯ ಆವಾಸ ಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀ ಚಕ್ರಕ್ಕೆ ಪೂಜೆ ನೆರವೇರಿಸಿದರು.

ನವರಾತ್ರಿ ಅಂಗವಾಗಿ ಶತಚಂಡಿಕಾ ಯಾಗದ ಅಂಗವಾಗಿ ಶ್ರೀಮಠದ ಪ್ರವಚನ ಮಂದಿರದ ಯಾಗಶಾಲೆಯಲ್ಲಿ ಶಾಲಾ ಪ್ರವೇಶ, ಪುರಶ್ಚರಣ ಆರಂಭಗೊಂಡಿತು. ಶ್ರೀಮಠದ ಅರ್ಚಕ ಶಿವಕುಮಾರ ಶರ್ಮ ನೇತೃತ್ವದ ಹತ್ತು ಋತ್ವಿಜರ ತಂಡ ಐದು ದಿನ ನಡೆಯುವ ಶತಚಂಡಿಯಾಗ ನೆರವೇರಿಸಲಿದೆ. ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಯಾಗ ನೆರವೇರಿಸುವಂತೆ ಅರ್ಚಕರ ತಂಡಕ್ಕೆ ಆಶೀರ್ವದಿಸಿದರು. ಚೆನ್ನೈನ ಅರ್ಚನಾ ಮತ್ತು ಆರತಿ ತಂಡದರಿಂದ ದ್ವಂದ್ವ ಹಾಡುಗಾರಿಕೆ ನಡೆಯಿತು.

ಬೇಗಾರು ಗ್ರಾಪಂ ಭಕ್ತಾದಿಗಳು ಮತ್ತು ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ರಾಜಬೀದಿ ಉತ್ಸವದಲ್ಲಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ದರ್ಬಾರ್‌: ರಾತ್ರಿ ಶ್ರೀಮಠದ ಒಳ ಪ್ರಾಂಗಣದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ದರ್ಬಾರ್‌ ನಡೆಸಿದರು. ಸ್ವರ್ಣ ರಥದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ, ಮೂರು ಪ್ರದಕ್ಷಿಣೆ ನಂತರ ವೇದ ಪಾರಾಯಣಗಳು, ಪಂಚಾಂಗ ಶ್ರವಣ, ವಾದ್ಯ ಸೇವೆ ಮತ್ತು ಮಹಾಮಂಗಳಾರತಿ ನಡೆಯಿತು. ಇದಕ್ಕೂ ಮೊದಲು ಪುರೋಹಿತ ಶಿವಕುಮಾರ ಶರ್ಮ ದುರ್ಗಾ ಸಪ್ತಶತಿ ಪಾರಾಯಣದ 6ನೇ ಅಧ್ಯಾಯ ಪಠಿಸಿದರು. ಶ್ರೀಮಠದ ಅಧಿ ಕಾರಿಗಳಾದ ಗೌರಿಶಂಕರ್‌, ದಕ್ಷಿಣಾಮೂರ್ತಿ ಮತ್ತಿತರರು ಇದ್ದರು. ನವರಾತ್ರಿ ಉತ್ಸವಕ್ಕೆ ಮಳೆ ಅಡ್ಡಿಯಾಗಿದ್ದು, ಗುರುವಾರ ಮಧ್ಯಾಹ್ನ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದ ಕೆಲವೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ಶಾರದಾಂಬೆ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳು ಪರದಾಡುವಂತಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next