Advertisement

ಬಸ್‌ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಹಣ ವಸೂಲಿ ಆರೋಪ

11:55 AM Mar 09, 2020 | Naveen |

ಶೃಂಗೇರಿ: ಶೌಚಾಲಯಗಳು ಮೂಲಭೂತ ಹಕ್ಕಾಗಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಸೇವೆ ನೀಡಬೇಕಾದ ನಗರಸಭೆ, ಪ್ರಯಾಣಿಕರಿಂದ ಹಣ ವಸೂಲಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

Advertisement

ಚಿಕ್ಕಮಗಳೂರು ರಾಜ್ಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಮಹಿಳಾ ಮೂತ್ರಾಲಯ ಬಳಕೆ ಉಚಿತವಾಗಿದ್ದರೂ, ಇದನ್ನು ಬಳಸಿದ್ದಕ್ಕಾಗಿ ಶೃಂಗೇರಿಯಿಂದ ತೆರಳಿದ್ದ ರಾತ್ರಿ ಬಸ್‌ ಪ್ರಯಾಣಿಕರ ತಂಡಕ್ಕೆ 50 ರೂ. ಶುಲ್ಕ ವಿಧಿ ಸಿ ಶೋಷಣೆ ಮಾಡಲಾಗಿದೆ ಎಂದು ಮಹಿಳಾ ಪ್ರಯಾಣಿಕರು ದೂರಿದ್ದಾರೆ.

ಬಸ್‌ ನಿಲ್ದಾಣದ ಮೂತ್ರಾಲಯದ ಗೋಡೆ ಮೇಲೆ ದೊಡ್ಡ ಅಕ್ಷರದಲ್ಲಿ ಮೂತ್ರಾಲಯ ಉಚಿತ, ಶೌಚಾಲಯ 3 ರೂ.ಎಂದು ಬರೆಯಲಾಗಿದೆ. ಆದರೂ, ಇದನ್ನು ನಿರ್ವಹಿಸುವ ಪುರುಷ ಸಿಬ್ಬಂದಿ ಮೂತ್ರಾಲಯ ಬಳಸಿ ಹೊರ ಬಂದವರನ್ನು ಅಡ್ಡಗಟ್ಟಿ
ತಲಾ 5ರೂ.ನಂತೆ 50 ರೂ. ಕೊಡಬೇಕೆಂದು ತಾಕೀತು ಮಾಡಿದ್ದಾನೆ. ಫೆ.26ರ ರಾತ್ರಿ ಶೃಂಗೇರಿ-ಬೆಂಗಳೂರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಮಹಿಳೆಯರು ನಡುರಾತ್ರಿ ಚಿಕ್ಕಮಗಳೂರು ನಿಲ್ದಾಣದಲ್ಲಿ ದೇಹಬಾಧೆ ತೀರಿಸಲು ಮೂತ್ರಾಲಯಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಉಚಿತ ಶುಲ್ಕದ ಬೋರ್ಡ್‌ ಬಗ್ಗೆ ಪ್ರಶ್ನಿಸಿದಾಗ ಅದು ಸ್ಟಾಫ್‌ಗೆ. ನೀವು ತಲಾ 5 ರೂ ಕೊಟ್ಟು ಹೋಗ್ತಾ ಇರಬೇಕು ಎಂದು ಸಿನೆಮಾ ಡೈಲಾಗ್‌ ಹೇಳಿದ್ದಾನೆ.

ಆತನೊಂದಿಗೆ ಚರ್ಚೆ ಮಾಡುವುದಕ್ಕಾಗದೇ, ಮುಜುಗರಕ್ಕೊಳಗಾಗಿ ಅವ್ಯವಸ್ಥೆ ಬಗ್ಗೆ ಮನಸ್ಸಿನಲ್ಲೇ ಶಪಿಸುತ್ತಾ ಹಣ ತೆತ್ತು ಪ್ರಯಾಣ ಮುಂದುವರೆಸಿದೆವು ಎಂದು ನೊಂದ ಮಹಿಳೆ ವಿವರಿಸಿದ್ದಾರೆ. ದೂರು ಸಲ್ಲಿಸಲು ಸ್ಥಳದ ಫೋಟೋ ತೆಗೆದಾಗ, ಬರಕೊಳ್ಳಿ, ಗುತ್ತಿಗೆದಾರನ ಹೆಸರು ಗುರು ಅಂತ ಎಂದು ಎತ್ತರದ ಸ್ವರದಲ್ಲಿ ಹೇಳಿದ್ದನ್ನು ನೋಡಿದಾಗ ಇಲ್ಲಿ ಶೌಚಾಲಯ ಮಾಫಿಯಾ ಬಲವಾಗಿರಬೇಕು ಎಂಬ ಸಂಶಯ ಉಂಟಾಯಿತು ಎಂದರು.

ರಾತ್ರಿಯ ಒಂದು ಬಸ್‌ ಪ್ರಯಾಣಿಕರಿಂದ 50 ರೂ. ಕಸಿದ ಈತ ದಿನವಿಡೀ ನಿಲ್ದಾಣಕ್ಕೆ ಬರುವ ಮಹಿಳಾ ಪ್ರಯಾಣಿಕರಿಂದ ಎಷ್ಟು ವಸೂಲಿ ಮಾಡಬಹುದು. ಮಹಿಳಾ ಶೌಚಾಲಯಕ್ಕೆ ಪುರುಷ ಸಿಬ್ಬಂದಿ ನಿಯುಕ್ತಿ ಎಷ್ಟು ಸರಿ. ಪುರುಷರಿಗೆ ಮೂತ್ರಾಲಯ ಉಚಿತ ಇರುವಾಗ ಮಹಿಳೆಯರಿಗೆ ಶುಲ್ಕ ವಿಧಿಸಿರುವುದು ಅಬಲೆಯರ ಶೋಷಣೆ ಅಲ್ಲವೇ ಎಂದು ಕೇಳಿದ್ದಾರೆ. ಜಿಲ್ಲಾಧಿಕಾರಿಗಳು ಇದನ್ನು ದೂರಾಗಿ ಪರಿಗಣಿಸಿ, ಮಹಿಳಾ ಶೋಷಣೆಗೆ ಕೊನೆ ಹಾಡಿದರೆ ಅದುವೇ ಅವರು ಮಹಿಳಾ ದಿನಾಚರಣೆಗೆ ಕೊಡಬಹುದಾದ ಒಳ್ಳೆಯ ಕೊಡುಗೆ ಆದೀತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next