Advertisement

ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ :ಕನ್ನಡ ಕಲಿಕಾ ತರಗತಿಗೆ ಚಾಲನೆ

04:20 PM Jul 18, 2018 | Team Udayavani |

ಡೊಂಬಿವಲಿ: ಸಂಘದಲ್ಲಿ ಕಳೆದ 10 ವರ್ಷಗಳಿಂದ ಡೊಂಬಿವಲಿ ಪರಿಸರದ ತುಳು-ಕನ್ನಡಿಗರ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕನ್ನಡವನ್ನು ಕಲಿಸುತ್ತಿದ್ದು, ಇದರ ಸದುಪಯೋಗವನ್ನು ಹಲವಾರು ಮಕ್ಕಳು ಪಡೆದುಕೊಂಡಿದ್ದಾರೆ. ತಾಯ್ನಾಡಿನಿಂದ ವಲಸೆ ಬಂದಿರುವ ನಾವು ನಮ್ಮ ಮಾತೃಭಾಷೆ ಕನ್ನಡವನ್ನು ಕಲಿಯುವುದು ಅನಿವಾರ್ಯವಾಗಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಕಲಿಯುವುದರಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳಿಗಾಗಿ ಸಂಸ್ಥೆಯು ಕನ್ನಡ ಕಲಿಕಾ ತರಗತಿಯನ್ನು ನಡೆಸುತ್ತಿದೆ. ಉತ್ತೀರ್ಣರಾದ ಮಕ್ಕಳಿಗೆ ಪ್ರತಿ ವರ್ಷ ಸಂಘದ ವತಿಯಿಂದ ನಡೆಯುವ ಶೈಕ್ಷಣಿಕ ಸಹಾಯ ವಿತರಣೆ ಸಮಾರಂಭದಲ್ಲಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ. ಭಾಷೆಯ ಅರಿವು ಆದಾಗ ಮಾತ್ರ ಸಂಸ್ಕೃತಿ-ಸಂಸ್ಕಾರದ ಅರಿವು ಮೂಡಲು ಸಾಧ್ಯವಾಗುತ್ತದೆ ಎಂದು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ಆರ್‌. ಕೆ. ಸುವರ್ಣ ಅವರು ನುಡಿದರು.

Advertisement

ಜು. 15ರಂದು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ವತಿಯಿಂದ ಅಸೋಸಿಯೇಶನ್‌ನ ಕಚೇರಿಯಲ್ಲಿ ನಡೆದ 2018-2019 ನೇ ಶೈಕ್ಷಣಿಕ ಸಾಲಿನ ಕನ್ನಡ ಕಲಿಕಾ ತರಗತಿಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಹೊಸದಾಗಿ ಕನ್ನಡ ಕಲಿಯಲು ಪ್ರವೇಶ ಪಡೆದ ಮಕ್ಕಳಿಗೆ ಶುಭಹಾರೈಸಿ, ಸಂಘದ ಎಲ್ಲಾ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಶೆಟ್ಟಿ ಇವರು ಮಾತನಾಡಿ, ಮಹಿಳಾ ವಿಭಾಗವು ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದು, ಕನ್ನಡ ಕಲಿಕಾ ತರಗತಿಗೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಸಹಕರಿಸುತ್ತಿದೆ ಎಂದರು.

ಕನ್ನಡ ಕಲಿಕಾ ತರಗತಿಯ ಮುಖ್ಯ ಶಿಕ್ಷಕಿ ಶೋಭಾ ಟಿ. ಪೂಜಾರಿ ಇವರು ಮಾತನಾಡಿ, ವಿದ್ಯಾದಾನ ಶ್ರೇಷ್ಟವಾದ ದಾನವಾಗಿದೆ. ಅರಿವಿಲ್ಲದವರಿಗೆ ಅರಿವನ್ನು ಮೂಡಿಸುವ ಕಾಯಕವನ್ನು ನಾವು ಮಾಡುತ್ತಿದ್ದೇವೆ. ಮಕ್ಕಳಿಗೆ ಕನ್ನಡಾಕ್ಷರ ಜ್ಞಾನದ ಅರಿವನ್ನು ಮೂಡಿಸುವ ಜವಾಬ್ದಾರಿಯನ್ನು ಸಂಘವು ನನಗೆ ನೀಡಿದೆ. ಕಳೆದ 10 ವರ್ಷಗಳಿಂದ ಅದನ್ನು ಕಾರ್ಯಗತಗೊಳಿಸುತ್ತಿದ್ದೇನೆ. ಪಾಲಕರು ಕಲಿಕಾ ತರಗತಿಗೆ ಮಕ್ಕಳನ್ನು ಸೇರಿಸಿ ಅವರ ಬದುಕಿಗೆ ದಾರಿದೀಪವಾಗಬೇಕು ಎಂದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಇವರು, ತರಗತಿಯ ಧ್ಯೇಯೋದ್ದೇಶಗಳನ್ನು ವಿವರಿಸಿ, ಮಕ್ಕಳು ತರಗತಿಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು. ಸಂಘದ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ತರಗತಿಯ ವಿದ್ಯಾರ್ಥಿಗಳಾದ ಸ್ವಾತಿ ಕೆ. ಶೆಟ್ಟಿ, ಸುಮಿತ್‌  ಶೆಟ್ಟಿ ಇವರು ಪ್ರಾರ್ಥನೆಗೈದರು. ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಅವರು ಸ್ವಾಗತಿಸಿದರು.

ಕನ್ನಡ ತರಗತಿಯ ವಿದ್ಯಾರ್ಥಿಗಳಾದ ವೆದಾಂತ್‌, ಸಾನ್ವಿ, ಚಿರಾಗ್‌ ಇವರು ಕನ್ನಡ ಕಲಿಕಾ ತರಗತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಂಜುನಾಥ ವಿದ್ಯಾಲಯದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ರಾಕ್‌ ಶೆಟ್ಟಿ, ರೋಶನ್‌ ಪೂಜಾರಿ, ಶ್ರುತಿ ಪೂಜಾರಿ ಇವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಯುವ ವಿಭಾಗದ ಉಪಾಧ್ಯಕ್ಷ ಗುರುರಾಜ ಸುವರ್ಣ, ಕನ್ನಡ ಕಲಿಕಾ ವಿಭಾಗದ ಶಿಕ್ಷಕಿ ಶೋಭಾ ಶೆಟ್ಟಿ, ಸುನಿತಾ ಪಾಲನ್‌, ಸುಮತಿ ಮೊಗವೀರ ಉಪಸ್ಥಿತರಿದ್ದರು. ಅಜೆಕಾರು ಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ದಾಮೋದರ ಸುವರ್ಣ ವಂದಿಸಿದರು.

Advertisement

ಸಂಸ್ಥೆಯ ಕಚೇರಿಯಲ್ಲಿ ನಡೆಯುತ್ತಿರುವ ಕನ್ನಡ ಕಲಿಕಾ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಂಡು ಇದರ ಸದುಪಯೋಗ ಪಡೆದು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕು. ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು. ಕನ್ನಡ ಭಾಷೆ ಅರಿತರೆ ಎಂದಾದರೂ ಒಂದು ಅದು ಉಪಯೋಗಕ್ಕೆ ಬರುತ್ತದೆ. ಇದನ್ನು ಮನದಲ್ಲಿಟ್ಟುಕೊಂಡು ಪಾಲಕರು ಮಕ್ಕಳನ್ನು ತರಗತಿಗೆ ಕಳುಹಿಸಿಕೊಡಬೇಕು 
– ದಾಮೋದರ ಸುವರ್ಣ (ಗೌರವ ಪ್ರಧಾನ ಕಾರ್ಯದರ್ಶಿ: ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌).

Advertisement

Udayavani is now on Telegram. Click here to join our channel and stay updated with the latest news.

Next