“ಭರಾಟೆ’ ಸಿನಿಮಾದ ನಂತರ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮತ್ತೂಂದು ಬಹುನಿರೀಕ್ಷಿತ ಚಿತ್ರ “ಮದಗಜ’ ಈ ವಾರ ತೆರೆಗೆ ಬಂದಿದೆ. ಈಗಾಗಲೇ “ಮದಗಜ’ ಸಿನಿಮಾದ ಟ್ರೇಲರ್, ಸಾಂಗ್ಸ್ ಎಲ್ಲದಕ್ಕೂ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇಂದಿನಿಂದ ಸುಮಾರು 900ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರೇಕ್ಷಕರಿಗೆ “ಮದಗಜ’ನ ದರ್ಶನ ಮಾಡಿಸಲು ಸಿದ್ಧವಾಗಿದೆ. ಇನ್ನು ನಟ ಶ್ರೀಮುರಳಿ ಅವರಿಗೂ “ಮದಗಜ’ನ ಮೇಲೆ ದುಪ್ಪಟ್ಟು ನಿರೀಕ್ಷೆ ಇದೆ. ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಇಲ್ಲಿಯವರೆಗೆ ಮಾಡಿರುವುದು ಒಂದು ಥರದ ಸಿನಿಮಾಗಳಾದರೆ, “ಮದಗಜ’ ಅವೆಲ್ಲದಕ್ಕಿಂತ ಬೇರೆಯದೇ ಥರ ಇರುವ ಸಿನಿಮಾ ಅನ್ನೋದು ಶ್ರೀಮುರಳಿ ಅಭಿಪ್ರಾಯ.
“ಒಂದು ಒಳ್ಳೆಯ ಸಿನಿಮಾ ಮಾಡಬೇಕಾದ್ರೆ, ಸಾಕಷ್ಟು ಒಳ್ಳೆಯ ಜನರು ಅಲ್ಲಿ ಸೇರಬೇಕು. ಎಲ್ಲರಿಗೂ ಹೊಸದೇನಾದ್ರೂ ಮಾಡುವ ಹಂಬಲವಿರಬೇಕು. ಒಬ್ಬರಿಗೊಬ್ಬರು ಸಾಥ್ ನೀಡಿದಾಗಲೇ, ನಾವು ಅಂದುಕೊಂಡಂತೆ, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಬಹುದು. “ಮದಗಜ’ ಅಂಥದ್ದೇ ಸಿನಿಮಾ. ಇಲ್ಲಿ ಲೈಟ್ ಬಾಯ್ಸ – ಯುನಿಟ್ ಹುಡುಗರಿಂದ ಹಿಡಿದು ನಿರ್ದೇಶಕರು, ನಿರ್ಮಾಪಕರು, ಆರ್ಟಿಸ್ಟ್, ಟೆಕ್ನೀಷಿಯನ್ಸ್ ಎಲ್ಲರೂ ಒಂದೇ ಭಾವದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಮಾಸ್ ಆಡಿಯನ್ಸ್, ಕ್ಲಾಸ್ ಆಡಿಯನ್ಸ್ ಅಂಥ ಭೇದ-ಭಾವವಿಲ್ಲದೆ ಎಲ್ಲ ಥರದ ಆಡಿಯನ್ಸ್‌ಗೂ ಇಷ್ಟವಾಗುವಂಥ ಸಿನಿಮಾ. ನನ್ನ ಪ್ರಕಾರ “ಮದಗಜ’ ಇಷ್ಟವಾಗದೇ ಇರೋದಕ್ಕೆ ಕಾರಣವೇ ಇಲ್ಲ…’ ಇದು ರೋರಿಂಗ್ ಸ್ಟಾರ್ ಶ್ರೀಮುರಳಿ ಮಾತು.
ಇನ್ನು ಮೇಲ್ನೋಟಕ್ಕೆ “ಮದಗಜ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಶೈಲಿಯ ಸಿನಿಮಾದಂತೆ ಕಂಡರೂ, ಇದು ಎಲ್ಲ ಥರದ ಮನರಂಜನಾತ್ಮಕ ಅಂಶಗಳಿರುವ, ಎಲ್ಲ ಥರದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಸಿನಿಮಾ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಶ್ರೀಮುರಳಿ. “ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇದೆ. ನವಿರಾದ ಪ್ರೀತಿ ಇದೆ. ಭರ್ಜರಿ ಆ್ಯಕ್ಷನ್ಸ್ ಇದೆ. ಮೆಲೋಡಿ ಸಾಂಗ್ಸ್ ಇದೆ. ಕಾಮಿಡಿ, ಡೈಲಾಗ್ಸ್, ರಿಚ್ ಮೇಕಿಂಗ್, ಅದ್ಧೂರಿ ಲೊಕೇಶನ್ಸ್ ಯಾವುದಕ್ಕೂ ಇಲ್ಲಿ ಕೊರತೆಯಿಲ್ಲ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್, ಟ್ರೇಲರ್, ಸಾಂಗ್ಸ್ ನೋಡಿದ್ರೆ, ಸಿನಿಮಾದ ರೇಂಜ್ ಏನು ಅನ್ನೋದು ಗೊತ್ತಾಗುತ್ತದೆ. ಹಾಗಾಗಿಯೇ ಆಡಿಯನ್ಸ್ ಕೂಡ ರಿಲೀಸ್ ಮೊದಲೇ “ಮದಗಜ’ನ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಎಂಟರ್‌ಟೈನ್ಮೆಂಟ್ ನಿರೀಕ್ಷಿಸಿ ಥಿಯೇಟರ್‌ಗೆ ಬರುವ ಪ್ರತಿಯೊಬ್ಬರಿಗೂ “ಮದಗಜ’ ಇಷ್ಟವಾಗುತ್ತದೆ’ ಎನ್ನುತ್ತಾರೆ ಶ್ರೀಮುರಳಿ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಮೊದಲೇ “ಮದಗಜ’ ಚಿತ್ರ ಬಿಡುಗಡೆಯಾಗಿರಬೇಕಿತ್ತು. ಆದರೆ ಕೋವಿಡ್ ಭಯ, ಲಾಕ್‌ಡೌನ್ ಆತಂಕದಿಂದ ಚಿತ್ರದ ಕೆಲಸಗಳಿಗೆ ಆಗಾಗ್ಗೆ ಬ್ರೇಕ್ ಬಿದ್ದಿದ್ದರಿಂದ, ಅಂದುಕೊಂಡ ಸಮಯಕ್ಕೆ “ಮದಗಜ’ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾತನಾಡುವ ಶ್ರೀಮುರಳಿ, “ಜಗತ್ತೇ ಕೆಲಕಾಲ ಕೊರೊನಾದಿಂದ ಸ್ತಬ್ಧವಾಗಿದ್ದರಿಂದ, ಆ ಎಫೆಕ್ಟ್ ನಮ್ಮ ಸಿನಿಮಾದ ಮೇಲೂ ಆಗಿದೆ. ಯಾವುದೇ ನಟ, ನಿರ್ದೇಶಕ, ನಿರ್ಮಾಪಕರಿಗೆ ತಮ್ಮ ಸಿನಿಮಾ ಅರ್ಧಕ್ಕೆ ನಿಂತಾಗ, ಅಂದುಕೊಂಡ ಸಮಯಕ್ಕೆ ರಿಲೀಸ್ ಆಗದಿದ್ದಾಗ ಸಹಜವಾಗಿಯೇ ಭಯ, ಆತಂಕ, ಬೇಸರ ಎಲ್ಲವೂ ಆಗುವುದು ಸಹಜ. ಅಂಥದ್ದೇ ಅನುಭವ ನನಗೂ ಆಗಿದೆ. ಹಾಗೇ ನಮ್ಮ ಟೀಮ್‌ಗೂ ಆಗಿದೆ. ಆದರೆ ಅದೆಲ್ಲವನ್ನೂ ಎಲ್ಲರೂ ಒಟ್ಟಾಗಿ ಎದುರಿಸಿ, ನಿಂತಿದ್ದರಿಂದಲೇ ಇಂದು ಸಿನಿಮಾ ಬಿಡುಗಡೆ ಮಾಡೋದಕ್ಕೆ ಸಾಧ್ಯವಾಗಿದೆ’ ಎನ್ನುತ್ತಾರೆ.
ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಶ್ರೀಮುರಳಿ, “ಇದರಲ್ಲಿ ನಾನು ಸೂರ್ಯ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಬಯಸದೇ ಬರುವ ಮತ್ತು ಬಯಸದೇ ಬಾರದ ಸನ್ನಿವೇಶಗಳನ್ನು ಹೇಗೆ ಎದುರಿಸುತ್ತಾನೆ ಅನ್ನೋದು ನನ್ನ ಪಾತ್ರ. ಹಿಂದಿನ ನನ್ನ ಎಲ್ಲ ಸಿನಿಮಾಗಳಿಗಿಂತ ಡಿಫರೆಂಟ್ ಲುಕ್, ಮ್ಯಾನರಿಸಂ ಎಲ್ಲವೂ ಈ ಪಾತ್ರದಲ್ಲಿದೆ. ಜನ ಸಿನಿಮಾ ರಿಲೀಸ್ ಆದಮೇಲೂ, ಸಿನಿಮಾದ ಬಗ್ಗೆ ಅದರ ಕಥೆ ಬಗ್ಗೆ ಮಾತಾಡಿಕೊಳ್ಳಬೇಕು ಅಂಥ ಸಿನಿಮಾ ಇದು. ಅಂಥದ್ದೊಂದು ಕಥೆ ಇದರಲ್ಲಿದೆ’ ಎನ್ನುತ್ತಾರೆ.
“ಮದಗಜ’ ಚಿತ್ರದ ಚಿತ್ರೀಕರಣವನ್ನು ಸುಮಾರು 74 ದಿನಗಳ ಕಾಲ ವಾರಾಣಸಿ, ಬೆಂಗಳೂರು, ಮೈಸೂರು ಹೀಗೆ ಹಲವು ಕಡೆಗಳಲ್ಲಿ ನಡೆಸಲಾಗಿದೆ. ಚಿತ್ರದಲ್ಲಿ ಶ್ರೀಮುರಳಿ ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ರಂಗಾಯಣ ರಘು, ದೇವಯಾನಿ, ಗರುಡ ರಾಮ್, ಚಿಕ್ಕಣ್ಣ, ಶಿವರಾಜ್ ಕೆ.ಆರ್ ಪೇಟೆ ಮುಂತಾದ ಕಲಾವಿದರ ದಂಡೇ ಚಿತ್ರದಲ್ಲಿದೆ. “ಉಮಾಪತಿ ಫಿಲಂಸ್’ ಬ್ಯಾನರ್‌ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿರುವ “ಮದಗಜ’ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ.
ಜಿ.ಎಸ್. ಕಾರ್ತಿಕ ಸುಧನ್