Advertisement

ಶ್ರೀಲೀಲೆ

11:55 AM Aug 16, 2018 | |

ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಅದು ಶ್ರೀಲೀಲಾದು. ಕಳೆದ ವರ್ಷದವರೆಗೂ ಶ್ರೀಲೀಲ ಹೆಸರನ್ನು ಬಹಳಷ್ಟು ಜನ ಕೇಳಿರಲಿಲ್ಲ. ಯಾವಾಗ ಎ.ಪಿ. ಅರ್ಜುನ್‌ ತಮ್ಮ ಹೊಸ ಚಿತ್ರ “ಕಿಸ್‌’ಗೆ ಹೊಸ ಹುಡುಗಿಯೊಬ್ಬಳನ್ನು ಪರಿಚಯಿಸಿದ್ದಾರೆ ಎಂದು ಸುದ್ದಿಯಾಯಿತೋ, ಅಲ್ಲಿಂದ ಶ್ರೀಲೀಲ ಹೆಸರು ಚಾಲ್ತಿಗೆ ಬಂತು.

Advertisement

ಆ ಚಿತ್ರದ ಬಿಡುಗಡೆಗೆ ಮುನ್ನವೇ, ಮುರಳಿ ಅಭಿನಯದ “ಭರಾಟೆ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಶ್ರೀಲೀಲ, ಮುಂದಿನ ವಾರ “ಭರಾಟೆ’ ಚಿತ್ರೀಕರಣಕ್ಕೆಂದು ರಾಜಸ್ತಾನಕ್ಕೆ ಹಾರಲಿದ್ದಾರೆ. ಎಲ್ಲಾ ಓಕೆ, ಶ್ರೀಲೀಲಾ ಚಿತ್ರರಂಗಕ್ಕೆ ಬಂದಿದ್ದು ಹೇಗೆ, “ಕಿಸ್‌’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮನ್ನು ಕಾಡಬಹುದು. ಅದಕ್ಕೆ ಕಾರಣ ಶ್ರೀಲೀಲಾ ಅವರ ಫೋಟೋ.

ಪ್ರತಿ ವರ್ಷ ಶ್ರೀಲೀಲಾ ಅವರ ಫೋಟೋಶೂಟ್‌ ಮಾಡಿಸುತ್ತಿದ್ದರಂತೆ ಅವರ ತಾಯಿ. ಫೋಟೋಶೂಟ್‌ ಮಾಡುತ್ತಿದ್ದುದು ಕನ್ನಡ ಚಿತ್ರರಂಗದ ಬೇಡಿಕೆಯ ಛಾಯಾಗ್ರಾಹಕ ಭುವನ್‌ ಗೌಡ. ಭುವನ್‌ ಗೌಡ, ಶ್ರೀಲೀಲಾ ಅವರ ಫ್ಯಾಮಿಲಿ ಫ್ರೆಂಡ್‌. ಭುವನ್‌ ಮಾಡಿದ ಫೋಟೋಶೂಟ್‌ ಅನ್ನು ಒಮ್ಮೆ ನೋಡಿದ ನಿರ್ದೇಶಕ ಎ.ಪಿ.ಅರ್ಜುನ್‌, “ನಮ್ಮ ಸಿನಿಮಾಕ್ಕೆ ಈ ಹುಡುಗಿಯೇ ಸೂಕ್ತ’ ಎಂದು ನಟಿಸುವಂತೆ ಕೇಳಿಕೊಂಡರಂತೆ.

ಸಿನಿಮಾದ ನಂಟಿರದ ಶ್ರೀಲೀಲಾ ಕುಟುಂಬ ಮೊದಲು, ಹಿಂದೇಟು ಹಾಕಿದ್ದು ಸುಳ್ಳಲ್ಲ. ಆ ನಂತರ ಕುಟುಂಬ ಸದಸ್ಯರೆಲ್ಲ ಚರ್ಚಿಸಿ, ಒಳ್ಳೆಯ ಪ್ರಾಜೆಕ್ಟ್ ಮಾಡಲಿ ಎಂದು ಗ್ರೀನ್‌ಸಿಗ್ನಲ್‌ ಕೊಟ್ಟರಂತೆ. ಆ ಮೂಲಕ “ಕಿಸ್‌’ಗೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ. “ಕಿಸ್‌’ ಸಿನಿಮಾದಲ್ಲಿನ ಶ್ರೀಲೀಲಾ ಅವರ ಅಭಿನಯ ನೋಡಿದ ನಿರ್ದೇಶಕ ಚೇತನ್‌ ಕುಮಾರ್‌ ತಮ್ಮ “ಭರಾಟೆ’ ಚಿತ್ರಕ್ಕೂ ಅವರನ್ನೇ ಆಯ್ಕೆ ಮಾಡಿದ್ದಾರೆ.

ಇಲ್ಲಿ ಶ್ರೀಲೀಲಾ ಬಬ್ಲಿಯಾಗಿರುವ ಜೊತೆಗೆ ಟ್ರಾವೆಲಿಂಗ್‌ ಇಷ್ಟಪಡುವ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಸಾಮಾನ್ಯವಾಗಿ ಚಿತ್ರರಂಗಕ್ಕೆ ಬರುವ ನಟಿಯರು ಆ್ಯಕ್ಟಿಂಗ್‌ ಹಾಗೂ ಡ್ಯಾನ್ಸ್‌ ತರಬೇತಿಯನ್ನಷ್ಟೇ ಪಡೆದಿರುತ್ತಾರೆ. ಆದರೆ, ಶ್ರೀಲೀಲಾ ಮಾತ್ರ ಅಷ್ಟಕ್ಕೆ ಸೀಮಿತವಾಗಿಲ್ಲ. ಡ್ಯಾನ್ಸ್‌, ಕುದುರೆ ಸವಾರಿ, ಹಾಕಿ, ರನ್ನಿಂಗ್‌ ರೇಸ್‌, ಸ್ವಿಮ್ಮಿಂಗ್‌ … ಹೀಗೆ ನಾನಾ ವಿಭಾಗಗಳಲ್ಲಿ ಮಿಂಚಿದ್ದಾರೆ.

Advertisement

ಶ್ರೀಲೀಲಾ ಮೂರೂವರೆ ವರ್ಷವಿರುವಾಗಿನಿಂದಲೇ ಕ್ಲಾಸಿಕಲ್‌ ಡ್ಯಾನ್ಸ್‌ ಅಭ್ಯಸಿಸುತ್ತಾ ಬಂದಿದ್ದಾರೆ. ಜೊತೆಗೆ ಬ್ಯಾಲೆಯ ತರಬೇತಿ ಕೂಡಾ ಪಡೆದ ಶ್ರೀಲೀಲಾ ಎಂಟನೇ ವಯಸ್ಸಿಗೆ ರಂಗಪ್ರವೇಶ ಮಾಡಿ, ಎರಡೂವರೆ ಗಂಟೆಗಳ ಕಾಲ ನೃತ್ಯಮಾಡಿ ರಂಜಿಸಿ, ಸೈ ಎನಿಸಿಕೊಂಡಿದ್ದಾರೆ. ನೃತ್ಯದ ನಾನಾ ಪ್ರಾಕಾರಗಳಲ್ಲಿ ಪಳಗಿರುವ ಶ್ರೀಲೀಲಾ ಕುದುರೆ ಸವಾರಿಯನ್ನು ಕಲಿತಿದ್ದಾರೆ. ಜೊತೆಗೆ ಒಳ್ಳೆಯ ಈಜುಗಾರ್ತಿ ಕೂಡಾ.

ಶ್ರೀಲೀಲಾ ಟ್ಯಾಲೆಂಟ್‌ ಇಷ್ಟಕ್ಕೆ ಮುಗಿಯೋದಿಲ್ಲ. ಶ್ರೀಲೀಲಾ ರನ್ನಿಂಗ್‌ ರೇಸ್‌ನಲ್ಲೂ ಕಾಲೇಜಿಗೆ ಹೆಸರು ತಂದುಕೊಟ್ಟಿದ್ದಾರೆ. ಹೆಚ್ಚು ತರಬೇತಿ ಪಡೆಯದೇ ಇದ್ದರೂ ಸ್ಪರ್ಧೆಯಲ್ಲಿ ಮಾತ್ರ ಯಾವುದಾದರೂ ಒಂದು ಕಪ್‌ ಗೆಲ್ಲುವಲ್ಲಿ ಶ್ರೀಲೀಲಾ ಯಾವತ್ತೂ ಹಿಂದೆ ಬಿದ್ದಿಲ್ಲ. ಶ್ರೀಲೀಲಾ ಒಳ್ಳೆಯ ಹಾಕಿ ಆಟಗಾರ್ತಿ ಕೂಡಾ. ಸಾಹಸ ಕ್ರೀಡೆಗಳೆಂದರೆ ಶ್ರೀಲೀಲಾಗೆ ತುಂಬಾ ಇಷ್ಟವಂತೆ. ಟ್ರಕ್ಕಿಂಗ್‌ ಸೇರಿದಂತೆ ಅಡ್ವೆಂಚರ್‌ಗಳಿಗೆ ಸದಾ ಮುಂದಾಗಿರುವ ಶ್ರೀಲೀಲಾ ಓದುವುದರಲ್ಲೂ ಹಿಂದೆ ಬಿದ್ದಿಲ್ಲ.

ಪಠ್ಯೇತರ ಚಟುವಟಿಕೆಗಳಲ್ಲಿ ಎಷ್ಟೇ ತೊಡಗಿಕೊಂಡರೂ ಪಠ್ಯದಲ್ಲಿ ಹಿಂದೆ ಬಿದ್ದಿಲ್ಲ. ಶೇ 85ಕ್ಕೂ ಮೇಲೆಯೇ ಅಂಕ ಪಡೆಯುತ್ತಾ ಬಂದವರು ಶ್ರೀಲೀಲಾ. ಸದ್ಯ ಕಾಲೇಜು ಓದುತ್ತಿರುವ ಶ್ರೀಲೀಲಾಗೆ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುವ ಆಸೆ ಇದೆ. ಹಾಗಂತ ಶಿಕ್ಷಣವನ್ನು ಬದಿಗೊತ್ತಿಯಲ್ಲ. ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ಕಡಿಮೆ. ಅಬ್ಬಬ್ಟಾ ಅಂದರೆ 10 ವರ್ಷ. ಆ ನಂತರ ಅವರಿಗೆ ಬೇಡಿಕೆ ಕಡಿಮೆ. ಹೀಗಿರುವಾಗ ಮತ್ತೆ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಎದುರು ನೋಡುವ ಬದಲು, ತಾವು ಪದವಿ ಪಡೆದ ವಿಷಯದಲ್ಲಿ ಮುಂದುವರೆಯಬೇಕೆಂಬುದು ಶ್ರೀಲೀಲಾ ಅವರ ಆಸೆ.

Advertisement

Udayavani is now on Telegram. Click here to join our channel and stay updated with the latest news.

Next