Advertisement

ಶ್ರೀಕ್ಷೇತ್ರ ಮೆಕ್ಕೆಕಟ್ಟು ಮೇಳ ತಿರುಗಾಟಕ್ಕೆ ಸಿದ್ಧ

01:39 AM Nov 17, 2023 | Team Udayavani |

ಕೋಟ: ಶಿರಿಯಾರ ಗ್ರಾಮದ ಮೆಕ್ಕೆಕಟ್ಟು ದೇವಸ್ಥಾನದ ಹೆಸರಿನಲ್ಲೇ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು- ಶಿರಿಯಾರ ಎನ್ನುವ ಬಡಗುತಿಟ್ಟಿನ ಹೊಸ ಮೇಳ ಆರಂಭಗೊಳ್ಳುತ್ತಿದ್ದು, ನ. 21ರಂದು ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆಯೊಂದಿಗೆ ಮೇಳದ ತಿರುಗಾಟ ಆರಂಭವಾಗಲಿದೆ.

Advertisement

ವಕ್ವಾಡಿ ರಂಜಿತ್‌ ಕುಮಾರ್‌ ಶೆಟ್ಟಿ ಅವರ ಯಜಮಾನತ್ವ ಹಾಗೂ ಬನ್ನಾಡಿ ಸಂತೋಷ ಕುಮಾರ್‌ ಶೆಟ್ಟಿ ಅವರ ಸಂಚಾಲಕತ್ವವಿದ್ದು, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಕೊಳ್ಳೆಬೈಲು ಕಿಶನ್‌ ಹೆಗ್ಡೆ ಮತ್ತು ಮೊಕ್ತೇಸರರು, ಕೊಳ್ಳೆಬೈಲು ಮೂರು ಮನೆಯವರು, ಆನುವಂಶಿಕ ಆರ್ಚಕರು, ಭಕ್ತರು ಸಹಕಾರ ನೀಡಿದ್ದಾರೆ.

ಡೇರೆ ಮೇಳದ ಗುಣಮಟ್ಟ ಬಡಗುತಿಟ್ಟಿನ ಪ್ರತಿಷ್ಠಿತ ಡೇರೆ ಮೇಳದ ಗುಣಮಟ್ಟವನ್ನು ಈ ಮೇಳ ಹೊಂದಿದ್ದು, ಬಹುತೇಕ ಡೇರೆಗಳ ಸ್ಟಾರ್‌ ಕಲಾವಿದರಿದ್ದಾರೆ. ಕಾಲಮಿತಿ ಹಾಗೂ ಇಡೀ ರಾತ್ರಿ ಎರಡೂ ರೀತಿಯ ಪ್ರದರ್ಶನಗಳಿಗೆ ಅವಕಾಶವಿದೆ.

ಕ್ಷೇತ್ರ ಮಹಾತ್ಮೆ ಬಿಡುಗಡೆ
ಕ್ಷೇತ್ರದ ಇತಿಹಾಸವನ್ನು ಸಾರುವ ಮೆಕ್ಕೆಕಟ್ಟು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್‌ ರಚಿಸಿದ್ದಾರೆ. ನಂದಿಯಾಗಿ ಹುಟ್ಟಿ ಅನಂತರ ವೃಷಭನಾಗಿ, ಶಿವನ ವಾಹನವಾಗುವ ನಂದಿಕೇಶ್ವರ ಸ್ವಾಮಿಯ ಚರಿತ್ರೆ ಮತ್ತು ಮೆಕ್ಕೆಕಟ್ಟುವಿನಲ್ಲಿ ಆತ ನೆಲೆಯಾಗುವುದು ಮತ್ತು ಜಂಬೂರು ಮಹಾಲಿಂಗೇಶ್ವರನ ಮಹಿಮೆಗಳು, ಚಂದಮ್ಮ ಶೆಡ್ತಿ ಎನ್ನುವ ದಿಟ್ಟ ಮಹಿಳೆ ಶಿರಿಯಾರ ಮೇಲ್ಮನೆಯಿಂದ ಪಾಲು ಹೊಂದಿ, ಕೊಳದಬೈಲು (ಕೊಳ್ಕೆಬೈಲಿನಲ್ಲಿ) ತನ್ನ ಸಂಸಾರವನ್ನು ಕಟ್ಟಿಕೊಳ್ಳಲು ಅನುಭವಿಸುವ ಯಾತನೆಯೊಂದಿಗೆ ಕಥೆ ಸಾಗುತ್ತದೆ. ಆಕೆ ಕೊಳ್ಕೆಬೈಲು ಮನೆತನದ ಮೂಲ ಯಜಮಾನಿಯಾಗಿ ದಿಟ್ಟ ನಿಲುವುಗಳು, ಸತ್ಯ ಸಂಧತೆಯಿಂದ ಬಾರ್ಕೂರು ಸಂಸ್ಥಾನದ ಮಾನ್ಯತೆಗೆ ಒಳಗಾಗಿ ಮೆಕ್ಕೆಕಟ್ಟಿನ ಪಾರುಪತ್ಯದ ಪೀಠ ಆಕೆಯ ಕೈ ಸೇರುವುದು ಮುಂತಾದ ಪೌರಾಣಿಕ ಹಾಗೂ ಚಾರಿತ್ರಿಕ ಕಥಾಹೂರಣ ಇದೆ.

ನ. 29ರಂದು ಶ್ರೀ ಕ್ಷೇತ್ರದಲ್ಲಿ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಎಡನೀರು ಮಠಾ ಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಬಿಡುಗಡೆಗೊಳಿಸಲಿದ್ದಾರೆ. ಪ್ರಸಂಗ ಕರ್ತ ದೇವದಾಸ್‌ ಈಶ್ವರಮಂಗಲ ಅವರ “ಸಾಗರ ಸಂಗಮ’ ಸಾಮಾಜಿಕ ಪ್ರಸಂಗ ಕೂಡ ತಿರುಗಾಟದಲ್ಲಿ ಪ್ರದರ್ಶನಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next