Advertisement

ಮಹಿಳೆಯರಿಗೆ 400 ಕೋಟಿ ರೂ. ಸಾಲ ಸೌಲಭ್ಯ

01:27 PM Jun 11, 2023 | Team Udayavani |

ಚಾಮರಾಜನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ‌ ಜಿಲ್ಲಾ ಶಾಖೆ ವತಿಯಿಂದ 400 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಸಂಸ್ಥೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ 7 ಜಿಲ್ಲೆಗಳ ಪೈಕಿ ಚಾಮರಾಜನಗರ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. 1500ಕ್ಕೂ ಹೆಚ್ಚು ಕಾರ್ಯ ಕರ್ತರು ಕೆಲಸ ಮಾಡುತ್ತಿದ್ದಾರೆ. ಇವರು ಸೇವಾ ಮನೋ ಭಾವನೆಯಿಂದ ದುಡಿಯುತ್ತಿದ್ದಾರೆ ಎಂದರು.

ಈಗಾಗಲೇ 20 ಕೆರೆಗಳ ಹೂಳೆತ್ತುವ ಕಾರ್ಯ ಪೂರ್ಣ: ಜಿಲ್ಲೆಯಲ್ಲಿ ಈಗಾಗಲೇ 20 ಕೆರೆಗಳ ಹೂಳೆತ್ತುವ ಕಾರ್ಯ ಮಾಡಲಾಗಿದೆ. ದಿವ್ಯಾಂಗರಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತಿದೆ. ವಾತ್ಸಲ್ಯ ಮನೆ ರಚನೆಯಡಿ 24 ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದರು.

ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕಾರ್ಯ ಮಾಡಲಾಗುತ್ತಿದ್ದು ಅಲ್ಲಿನ ಸಬಲೀಕರಣಕ್ಕೆ ಕ್ರಮವಹಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆರ್ಥಿಕ ಸಹಾಯ ಮಾಡಲಾಗುವುದು. ಆರೋಗ್ಯ ಕಾರ್ಡ್‌ ಯೋಜನೆಯಡಿ 1.20 ಲಕ್ಷ ರೂ. ತನಕ ವಿಮೆ ನೀಡಲಾಗುತ್ತಿದೆ ಎಂದು ಹೇಳಿದರು.

23.32 ಲಕ್ಷ ಮಾಸಾಶನ ವಿತರಣೆ: ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರದ ಮೂಲಕ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ. ಸ್ವ ಉದ್ಯೋಗ ಸಾಲ ವಿತರಣೆ, ಸ್ವ ಉದ್ಯೋಗ ಘಟಕಗಳ ನಿರ್ಮಾಣ ಮಾಡಲಾಗಿದೆ. ದೇವಸ್ಥಾನ ಜೀರ್ಣೋದ್ಧಾರ ಹಾಗೂ ಹಾಲು ಉತ್ಪಾದಕ ಸಂಘಗಳಿಗೆ 16.50 ಲಕ್ಷ ಅನುದಾನ ನೀಡಲಾಗಿದೆ. ನಿರ್ಗತಿಕರಿಗೆ 23.32 ಲಕ್ಷ ಮಾಸಾಶನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಅಲ್ಲದೇ ಜಿಲ್ಲೆಯಲ್ಲಿ 28819 ಜನರಿಗೆ ಈ ಶ್ರಮ್‌ ಕಾರ್ಡ್‌ ವಿತರಣೆ ಮಾಡಲಾಗಿದೆ. ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟದ ಸಾಲಿನ ಗ್ರಾಮಗಳ ಸರ್ವೇ ಕಾರ್ಯ ಮಾಡಲಾಗಿದೆ. 100 ಹೊಸ ಸಂಘಗಳ ರಚನೆ ಗುರಿ ಹೊಂದಲಾಗಿದೆ ಎಂದರು.

ಮಾಹಿತಿ ಲಭ್ಯತೆ ಸುಲಭ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘಗಳಿಗೆ ನೀಡಲಾಗುವ ಸಾಲ ಸೌಲಭ್ಯ, ಮರು ಪಾವತಿ ಸೇರಿದಂತೆ ಇತರೆ ಮಾಹಿತಿಗಳನ್ನು ಮುಂದೆ ಸಂಪೂರ್ಣ ಡಿಜಟಲೀಕರಣಗೊಳ್ಳಲಿದೆ. ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತನ್ನ ಕಾರ್ಯವನ್ನು ಆರಂಭಿಸಿ 11 ವರ್ಷಗಳು ಪೂರ್ಣಗೊಂಡಿವೆ. 12ನೇ ವರ್ಷದ ಆರಂಭದಲ್ಲೇ ಸಂಸ್ಥೆಯ ಸೇವೆಗಳನ್ನು ಡಿಜಟಲೀಕರಣಗೊಳಿಸಲಾಗುತ್ತಿದೆ. ಇದರಿಂದ ಮಾಹಿತಿ ಲಭ್ಯತೆ ಸುಲಭವಾಗಲಿದ್ದು, ಪಾರದರ್ಶಕತೆ ಯನ್ನು ಕಾಯ್ದುಕೊಂಡಂತಾಗುತ್ತದೆ ಎಂದು ತಿಳಿಸಿದರು.

ಆತ್ಮವಿಶ್ವಾಸ ಮನೆ ಮಾಡಿದೆ: ಜಿಲ್ಲೆಯಲ್ಲಿ ಒಟ್ಟು ನಮ್ಮ ಸಂಸ್ಥೆ ವ್ಯಾಪ್ತಿಯ 15,878 ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳು ರಚನೆಗೊಂಡಿವೆ. 1,18,093 ಕುಟುಂಬಗಳು ಈ ಸ್ವಸಹಾಯ ಸಂಘದ ವ್ಯಾಪ್ತಿಯಲ್ಲಿವೆ. ಈ ವರೆಗೆ ಸಂಸ್ಥೆಯ ನೇತೃತ್ವದಲ್ಲಿ ಬ್ಯಾಂಕ್‌ ಮೂಲಕ ಸ್ವಸಹಾಯ ಸಂಘದ ಸದಸ್ಯರಿಗೆ ಈ 12 ವರ್ಷಗಳಲ್ಲಿ ಒಟ್ಟು 400 ಕೋಟಿ ರೂ. ಸಾಲವನ್ನು ಕೊಡಿಸಲಾಗಿದೆ. ಅದು ಸಹ ಸಮರ್ಪಕ ರೀತಿಯಲ್ಲಿ ಮರುಪಾವತಿಯೂ ಆಗುತ್ತಿದೆ. ಈ ಸೌಲಭ್ಯದ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ಅವರಲ್ಲಿ ಆತ್ಮ ವಿಶ್ವಾಸ ಮನೆ ಮಾಡಿದೆ ಎಂದು ವಿವರಿಸಿದರು. ಇನ್ನು ನಮ್ಮ ಸಂಸ್ಥೆಯಲ್ಲಿ ಒಟ್ಟು 1056 ಮಂದಿ ಸಿಬ್ಬಂದಿ ಇದ್ದಾರೆ. ಒಟ್ಟು 30 ವಿಭಾಗಗಳಲ್ಲಿ ನಮ್ಮ ಸಿಬ್ಬಂದಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಜನತೆಗೆ ಸರಕಾರಿ ಸೌಲಭ್ಯಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆಯ 150 ಜ್ಞಾನ ವಿಕಾಸ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ವಾತ್ಸಲ್ಯ ಮನೆಗಳ ನಿರ್ಮಾಣ: ಜಿಲ್ಲೆಯಲ್ಲಿ ಈವರೆಗೆ ಪೂರ್ಣ ಪ್ರಮಾಣದ ನಿರ್ಗತಿಕರಿಗೆ 24 ವಾತ್ಸಲ್ಯ ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. 15 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ದೇವಾಲಯಗಳ ಜೀರ್ಣೋದ್ಧಾರಗೊಳಿಸಲಾಗಿದೆ ಎಂದರು.

ಸಂಸ್ಥೆ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಕ್ಷೇತ್ರ ಯೋಜನಾಧಿಕಾರಿಗಳಾದ ಹರೀಶ್‌ಕುಮಾರ್‌, ಪುರುಷೋತ್ತಮ್‌, ಪ್ರವೀಣ್‌, ಚಂದ್ರಶೇಖರ, ದಿನೇಶ್‌, ಪ್ರವೀಣ್‌ , ಎಂಐಎಸ್‌ ಯೋಜನಾಧಿಕಾರಿ ಗಣಪತಿ ಉಪಸ್ಥಿತರಿದ್ದರು.

ಕುಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಚಿತ್ತ : ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘವು ಈ ಸಾಲಿನಲ್ಲಿ ಮಲೆ ಮಹದೇಶ್ವರಬೆಟ್ಟ ಭಾಗದ ಕುಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಿದೆ. ಈಗಾಗಲೇ ಆ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಂಕಷ್ಟದ ಜೀವನ ನಡೆಸುತ್ತಿರುವ ಆ ಗ್ರಾಮಗಳ ಜನತೆಗೆ ಸಂಸ್ಥೆಯ ಸೌಲಭ್ಯಗಳನ್ನು ದೊರಕಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನು ಆ ಭಾಗದ ಗ್ರಾಮಗಳ ಜನತೆಯ ಓಡಾಟಕ್ಕೆ ಸಾರಿಗೆ ವ್ಯವಸ್ಥೆ ಇಲ್ಲವಾಗಿದ್ದು, ಅರಣ್ಯ ಇಲಾಖೆ ಜನ-ವನ ವಾಹನವನ್ನು ಪುನಾರಂಭಿಸುವ ನಿಟ್ಟಿನಲ್ಲೂ ಮಾತುಕತೆ ನಡೆಸಲಾಗುವುದು ಎಂದು ನೆಲ್ಲಿತ್ತಾಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next