ಮುಂಬಯಿ: ಸಜ್ಜನರ ಸಂಗಮವೇ ಶ್ರೀ ಕೃಷ್ಣನ ಅವತಾರ ಆಗಿದ್ದು, ಭಕ್ತರ ರಕ್ಷಣೆ ಶ್ರೀ ಕೃಷ್ಣನ ಸಂಕಲ್ಪವಾಗಿದೆ. ಅನನ್ಯ ಭಕ್ತಿಯಿಂದ ಶ್ರೀ ಕೃಷ್ಣನನ್ನು ಭಜಿಸಿ ಪೂಜಿಸಿದ ಮಾನವ ಜೀವನವು ಸನ್ಮರ್ಗದತ್ತ ಸಾಗುವುದು. ಕಾರಣ ಭಕ್ತರ ರಕ್ಷಣೆಯೇ ಕೃಷ್ಣನ ಶ್ರೀರಕ್ಷೆ ಆಗಿದೆ. ಪರಮಾತ್ಮ ನಮಗೋಸ್ಕರ ಸತ್ಕರ್ಮ ಮಾಡುವತ್ತಾ ಅವತರಿಸಿದ್ದು, ದೇವರು ಕೊಡುವ ಕಷ್ಟದ ಹಿಂದಿನ ರಹಸ್ಯ ಎಂದಿಗೂ ಒಳಿತಾಗಿರುತ್ತದೆ. ಕೃಷ್ಣಾವತಾರ ವಿಶೇಷವಾಗಿದ್ದು ಜ್ಞಾನ ಮತ್ತು ಬಲ ತೋರ್ಪಡಿಸುತ್ತದೆ. ಇವುಗಳಿಂದ ದುಷ್ಟ ಶಕ್ತಿಗಳ ನಿರ್ಮೂಲನೆಯಾಗಿ ಸತ್ಕರ್ಮಗಳ ಫಲ ಫಲಿಸುತ್ತದೆ. ಶ್ರೀ ಕೃಷ್ಣನು ತನ್ನ ನಡತೆ, ಮಾತು, ಕೃತಿಗಳಿಂದ ಉತ್ತಮ ಜೀವನ ದಯಾಪಾಲಿಸಿದ್ದು, ದೇವರು ಕೊಟ್ಟ ಕಷ್ಟಗಳು ಭಕ್ತರನ್ನು ತಿದ್ದುವ ಪರಿಯಾಗಿವೆಯೇ ಹೊರತು ದುಷ್ಟತ್ವ ಅಲ್ಲ. ಆದ್ದರಿಂದ ಮನುಜನು ಕಷ್ಟ ನಷ್ಟ, ಸಮಸ್ಯೆಗಳನ್ನು ಸಮಾನವಾಗಿ ಸ್ವೀಕರಿಸಿ ದೇವರನ್ನು ಕೆಡುಕದೆ ಇಷ್ಟಾರ್ಥ ಸಿದ್ಧಿಸಿದಾಗ ಮರೆಯದೆ ಆರಾಧಿಸಿ ಮುನ್ನಡೆದಾಗಲೇ ನಾವು ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಡಿ. 30 ರಂದು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯ ಜಗದ್ಗುರು ಶ್ರೀ ಮಧ್ವಾ ಚಾರ್ಯ ಮಹಾ ಸಂಸ್ಥಾನ ಉಡುಪಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿನ ಶಿಲಾಮಯ ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ದೇವರ ತೃತೀಯ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ದೇವರಿಗೆ ಕಲಶಾಭಿಷೇಕ, ಮಹಾ ಆರತಿ ನೆರವೇರಿಸಿ ತುಳಸೀ ಆರ್ಚನೆ ಗೈದು ನೆರದ ಸದ್ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಮುಂಬಯಿ ಭಕ್ತಾದಿಗಳ ಪ್ರೀತ್ಯಾದರಗಳನ್ನು ಕಂಡಾಗ ಸಂತೋಷವಾಗುತ್ತಿದೆ ಎಂದು ನುಡಿದು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಸಮಿತಿಯ ಗೌರವ ಕಾರ್ಯದರ್ಶಿ ಬಿ. ಆರ್. ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಡಾ| ಸುರೇಶ್ ಎಸ್. ರಾವ್ ಕಟೀಲು, ಡಾ| ಎಂ. ಎಸ್. ಆಳ್ವ, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಎಸ್. ಕೆ. ಭವಾನಿ, ಶೇಖರ್ ಎಸ್. ಸಾಲ್ಯಾನ್, ಕನ್ನಡ ಚಿತ್ರನಟಿ ರೇಖಾ, ಮಠದ ಶಾಖಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೆr, ಪ್ರತಿಷ್ಠಾನದ ವಿಶ್ವಸ್ಥರು, ಪದಾಧಿಕಾರಿಗಳು ಹಾಗೂ ಪುರೋಹಿತ ವರ್ಗದವರು ಉಪಸ್ಥಿತರಿದ್ದರು.
ಮುಂಜಾನೆಯಿಂದಲೇ ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪುಣ್ಯಾವಾಚನ, ಚಕ್ರಬj ಮಂಡಲಾರಾಧನೆ, ಕಲಶ ಪ್ರತಿಷ್ಠಾಪನೆ, ತತ್ವ ಮತ್ತು ಪ್ರಧಾನ ಹೋಮ, ಕಲಶಾಭಿಷೇಕ, ನ್ಯಾಸ, ಮಹಾಪೂಜೆ ನೆರವೇರಿಸಿ ಮಹಾ ಪ್ರಸಾದ ವಿತರಿಸಿದರು. ಪುರೋಹಿತರಾದ ಕೃಷ್ಣ ಭಟ್, ಆದಿತ್ಯ ಕಾರಂತ, ವಿಷ್ಣುತೀರ್ಥ ಸಾಲಿ ಅವರು ವಿವಿಧ ಪೂಜಾದಿ ಕಾರ್ಯಕ್ರಮಗಳನ್ನು ನೆರವೇರಿಸಿದರು.
ದಿನೇಶ್ ವಿನೋದ್ ಕೋಟ್ಯಾನ್ ಮತ್ತು ಬಳಗದವರಿಂದ ನಾದಸ್ವರ, ಸ್ಯಾಕೊÕàಫೋನ್, ಚೆಂಡೆ, ವಾದ್ಯಘೋಷದೊಂದಿಗೆ ಭಕ್ತರು ಶ್ರೀಗಳನ್ನು ಮಂದಿರಕ್ಕೆ ಬರಮಾಡಿಕೊಂಡರು. ಮಧೆÌàಶ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಹಾನಗರದಲ್ಲಿನ ಭಕ್ತಮಹಾಶಯರು ಈ ಪುಣ್ಯಾದಿ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್