ಕಲಬುರಗಿ: ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆ. 2 ರಂದು ಸಂಭ್ರಮದಿಂದ ಆಚರಿಸಲು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸರ್ವಾನುಮತದಿಂದ ನಿರ್ಧರಿಸಿತು.
ದಿನಾಚರಣೆ ಅಂಗವಾಗಿ ಸೆ. 2 ರಂದು ಬೆಳಗ್ಗೆ 9:30 ಕ್ಕೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಾ| ಎಸ್.ಎಂ. ಪಂಡಿತ ರಂಗಮಂದಿರ ವರೆಗೆ ಶ್ರೀಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಶ್ರೀಕೃಷ್ಣನ ಹಾಡುಗಳನ್ನು ಹಾಡುವ ಭಜನಾ ಮತ್ತು ಡೊಳ್ಳು ಕುಣಿತ ತಂಡಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಯಿತು.
ಅಂದು ಬೆಳಗ್ಗೆ 11 ಕ್ಕೆ ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಚರಣೆ ಸಮಾರಂಭ ಆಯೋಜಿಸಲಾಗುವುದು. ದಿನಾಚರಣೆ ಅಂಗವಾಗಿ ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜನಪ್ರತಿನಿಧಿ ಗಳನ್ನು ಆಹ್ವಾನಿಸಲು ಹಾಗೂ ಪ್ರೊ| ವಸಂತ ಕುಷ್ಠಗಿ ಅವರಿಂದ ಉಪನ್ಯಾಸ ಏರ್ಪಡಿಸಲು ಸಭೆ ನಿರ್ಣಯ ಕೈಗೊಂಡಿತು.
ಅರ್ಚಕರಿಂದ ಶ್ರೀಕೃಷ್ಣನ ಭಾವಚಿತ್ರ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲು ಹಾಗೂ ದಾಸವಾಣಿ, ಭರತನಾಟ್ಯಗಳಂಥಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹ ಸಭೆಯು ನಿರ್ಣಯ ಕೈಗೊಂಡಿತು. ಮೆರವಣಿಗೆ ಭಾಗವಹಿಸುವ ಹಾಗೂ ರಂಗಮಂದಿರದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಶ್ರೀಕೃಷ್ಣ ನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಿನಾಚರಣೆ ಆಚರಿಸಲು ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲು ಸಭೆ ತೀರ್ಮಾನಿಸಿತು. ಸಭೆಯಲ್ಲಿ ಭಾಗವಹಿಸಿದ ಯಾದವ ಸಮಾಜದ ಮುಖಂಡರು ಕಾರ್ಯಕ್ರಮದ ಯಶಸ್ವಿಗೆ ಸಲಹೆ ನೀಡಿದರು.
ಜಿಲ್ಲಾ ಯಾದವ ಸಮಾಜದ ಜಿಲ್ಲಾಧ್ಯಕ್ಷ ರವೀಂದ್ರ ಉದನೂರ, ಉಪಾಧ್ಯಕ್ಷ ಸುಭಾಷಚಂದ್ರ ರಾಜನ್, ಕಾರ್ಯದರ್ಶಿ ಕಲ್ಲಪ್ಪ ಯಾದವ ಸೇರಿದಂತೆ ಇನ್ನಿತರ ಸಮಾಜದ ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಕೊಟ್ರೇಶ್ ಮರಬನಳ್ಳಿ ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆ ವಿವರಿಸಿದರು.