Advertisement

Lok Sabha Elections; ಪುತ್ರನ ಸ್ಪರ್ಧೆಗೆ ಒಲ್ಲದ ಸಿಎಂ ಸಿದ್ದರಾಮಯ್ಯ

10:34 PM Mar 16, 2024 | Team Udayavani |

ಬೆಂಗಳೂರು: ಮೈಸೂರು ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ಕಣಕ್ಕಿಳಿಸಬೇಕೆಂಬ ಕಾಂಗ್ರೆಸ್‌ ಹೈಕಮಾಂಡ್‌ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿಯದ ಕಾರಣ ಅಲ್ಲಿಂದ ಬಿಜೆಪಿಯ ಯದುವೀರ್‌ ಒಡೆಯರ್‌ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ನಿಚ್ಚಳವಾಗಿದೆ.

Advertisement

ಈ ಸಲ ಹಾಲಿ ಸಂಸದ ಪ್ರತಾಪ ಸಿಂಹಗೆ ಬಿಜೆಪಿ ಟಿಕೆಟ್‌ ನಿರಾಕರಿಸಿ ಅವರ ಬದಲಿಗೆ ಮೈಸೂರಿನ ರಾಜಮನೆತನ ಯದುವೀರ ಒಡೆಯರ್‌ಗೆ ಬಿಜೆಪಿ ಟಿಕೆಟ್‌ ಘೋಷಣೆಯಾದ ಬಳಿಕ ಕಾಂಗ್ರೆಸ್‌ನಲ್ಲಿ ಹೊಸಬಗೆಯ ಲೆಕ್ಕಾಚಾರಗಳು ಶುರುವಾಗಿವೆ. ಆರಂಭದಿಂದಲೂ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಪುತ್ರ ಯತೀಂದ್ರ ಸ್ಪರ್ಧೆಗೆ ಒಲವು ತೋರಿದ್ದರೂ ಸಿಎಂ ಮಾತ್ರ ಇದುವರೆಗೂ ಕಿಂಚಿತ್ತೂ ಆಸಕ್ತಿ ತೋರಿಲ್ಲ.

ಒಂದು ವೇಳೆ ಪುತ್ರ ಡಾ.ಯತೀಂದ್ರ ಸ್ಪರ್ಧಿಸಿದರೆ ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ಪರಸ್ಪರ ಕೈಜೋಡಿಸಿ ಫ‌ಲಿತಾಂಶ ಹೆಚ್ಚುಕಡಿಮೆಯಾದರೆ ಅದು ತಮ್ಮ ಬುಡಕ್ಕೆ ಬಂದು ಬೀಳುತ್ತದೆ ಎಂಬ ಆತಂಕ ಇರುವುದರಿಂದಲೇ ಸಿಎಂ ಸಿದ್ದರಾಮಯ್ಯ ಅವರು ಪುತ್ರನ ಸ್ಪರ್ಧೆಗೆ ಆರಂಭದಿಂದಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮೈಸೂರಿನಿಂದ ಲಕ್ಷ್ಮಣ ಸ್ಪರ್ಧೆ ಖಚಿತವೆಂದು ಹೇಳಲಾಗುತ್ತಿದೆ.

ಚಾಮರಾಜನಗರ ಕ್ಷೇತ್ರದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪುತ್ರ ಸುನಿಲ್‌ಬೋಸ್‌ ಸ್ಪರ್ಧೆ ಖಚಿತವಾಗಿದ್ದರೂ ಈಗಲೂ ಸಚಿವ ಮಹದೇವಪ್ಪ ಅವರ ಸ್ಪರ್ಧಿಸುವುದು ಸೂಕ್ತ ಎಂಬ ಅಭಿಪ್ರಾಯ ಹೈಕಮಾಂಡ್‌ ಮಟ್ಟದಲ್ಲಿ ವ್ಯಕ್ತವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಸಿಎಂ ವಿವೇಚನೆಗೆ ಬಿಟ್ಟಿರುವ ಕಾಂಗ್ರೆಸ್‌ ಹೈಕಮಾಂಡ್‌ ಸೋಲು-ಗೆಲುವು ಎಲ್ಲವನ್ನೂ ಸಿಎಂ ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next