Advertisement

ಸೆ. 28ರಿಂದ ಶ್ರೀಕೃಷ್ಣ ಮಠ ಭಕ್ತರಿಗೆ ಮುಕ್ತ; ಮೊದಲ ಹಂತದಲ್ಲಿ ಅಪರಾಹ್ನ 2- 5 ಗಂಟೆ ವರೆಗೆ

11:39 PM Sep 19, 2020 | mahesh |

ಉಡುಪಿ: ಸರಕಾರದ ಮಾರ್ಗಸೂಚಿಯಂತೆ ಮತ್ತು ಭಕ್ತರಿಗೆ ಅನುಕೂಲವಾಗುವಂತೆ ಕೆಲವು ಷರತ್ತುಗಳೊಂದಿಗೆ ಸೆ. 28ರಿಂದ ಶ್ರೀಕೃಷ್ಣ ಮಠದಲ್ಲಿ ದರ್ಶನಾವಕಾಶ ಕಲ್ಪಿಸಲಾಗುವುದು.

Advertisement

ಕೋವಿಡ್ ಸೋಂಕಿನ ಕಾರಣದಿಂದ ಮಾ. 22ರಿಂದ ಶ್ರೀಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೆ. 21ರಿಂದ ಕೇಂದ್ರ ಸರಕಾರವೂ ಮಾರ್ಗಸೂಚಿಗಳನ್ನು ಸಡಿಲ ಗೊಳಿಸಲಿರುವುದರಿಂದ ಭಕ್ತರ ಅನುಕೂಲಕ್ಕಾಗಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ ಎಂದು ವ್ಯವಸ್ಥಾಪಕ ಗೋವಿಂದರಾಜ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರವಾಸೋದ್ಯಮ, ಸಾರಿಗೆ ಇತ್ಯಾದಿ ಉಡುಪಿಯ ಆರ್ಥಿಕ ಚಟುವಟಿಕೆ ಚುರುಕುಗೊಳ್ಳಬೇಕಾದರೆ ಶ್ರೀಕೃಷ್ಣ ಮಠಕ್ಕೆ ಭಕ್ತರ ಪ್ರವೇಶ ಆಗಬೇಕಾಗುತ್ತದೆ. ಭಕ್ತರು ಸಾಗಿ ಬರುವ ದಾರಿಯಲ್ಲಿ ಬೇಕಾದ ಮಾರ್ಗದರ್ಶನಗಳನ್ನು ಸೇವಾ ಕೌಂಟರ್‌ನಲ್ಲಿ ನೀಡಲಾಗುವುದು. ಪ್ರವೇಶ ಸಮಯದ ವಿಸ್ತರಣೆಯನ್ನು, ಭೋಜನ ಪ್ರಸಾದವನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದು ಗೋವಿಂದರಾಜ್‌ ತಿಳಿಸಿದರು.

ಶ್ರೀಕೃಷ್ಣ ಸೇವಾ ಬಳಗದ ವೈ.ಎನ್‌. ರಾಮಚಂದ್ರ ರಾವ್‌, ಯಶಪಾಲ್‌ ಸುವರ್ಣ, ದಿನೇಶ ಪುತ್ರನ್‌, ಹೈಟೆಕ್‌ ಪ್ರದೀಪ್‌ ರಾವ್‌, ಸಂತೋಷ ಕುಮಾರ್‌ ಉದ್ಯಾವರ, ಮಾಧವ ಉಪಾಧ್ಯಾಯ, ಶ್ರೀನಿವಾಸ ಪೆಜತ್ತಾಯ, ಕೊಠಾರಿ ಶ್ರೀರಮಣ ಕಲ್ಕೂರ ಉಪಸ್ಥಿತರಿದ್ದರು.

ನಿಬಂಧನೆಗಳು

Advertisement

 ಅಪರಾಹ್ನ 2ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಪ್ರವೇಶವಿರುತ್ತದೆ. ಎಲ್ಲ ಭಕ್ತರು ರಾಜಾಂಗಣದ ಬಳಿ ಇರುವ ಉತ್ತರ ದ್ವಾರದ ಮೂಲಕ ಪ್ರವೇಶಿಸಬೇಕು. ಅಲ್ಲಿಂದ ಭೋಜನಶಾಲೆ ಮೇಲ್ಗಡೆಯಿಂದ ಸಾಗಿ ಗರುಡದೇವರ ಬಳಿ ಇಳಿದು ದರ್ಶನ ಮಾಡಿ ಮುಖ್ಯಪ್ರಾಣ ದೇವರ ಗುಡಿ ಬಳಿ ಮೆಟ್ಟಿಲು ಏರಿ ಅಲ್ಲಿಂದ ನಿರ್ಗಮಿಸಬೇಕು. 

 ಸ್ಥಳೀಯ ಭಕ್ತರು ಮುಂದಿನ ದಿನಗಳಲ್ಲಿ ರಥಬೀದಿಯಿಂದ ಮಧ್ವಸರೋವರದ ಮೇಲಿರುವ ದಾರಿಯಿಂದ ಪ್ರವೇಶ/ ದರ್ಶನ ಮಾಡಬಹುದು. ಇಂತಹವರು ಅಗತ್ಯದ ದಾಖಲೆ ಪತ್ರ ನೀಡಿ ಶ್ರೀಕೃಷ್ಣ ಮಠದಿಂದ ಪ್ರವೇಶ ಪತ್ರವನ್ನು ಪಡೆಯಬಹುದು. ಇಲ್ಲವಾದರೆ ಉತ್ತರ ದ್ವಾರದ ಮೂಲಕ ದರ್ಶನ ಪಡೆಯಬಹುದು. 

 ಸೇವಾ ಕೌಂಟರ್‌ನಲ್ಲಿ ಪ್ರಸಾದ ವಿತರಣೆ ಇರುತ್ತದೆ.

 ಯಾರೂ ಮಠದ ಆವರಣದೊಳಗೆ ಮಂತ್ರ, ಪಾರಾಯಣ ಮಾಡಬಾರದು. ಮೌನ ವಾಗಿರಬೇಕು.

 ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್‌ ಬಳಸಿಕೊಳ್ಳಬೇಕು. ಭದ್ರತಾ ಸಿಬಂದಿಯ ಸೂಚನೆಗಳನ್ನು ಪಾಲಿಸಬೇಕು. 

 ಹಿರಿಯ ನಾಗರಿಕರು, ಚಿಕ್ಕ ಮಕ್ಕಳ ಶರೀರ ಸೂಕ್ಷ್ಮವಾಗಿರುವುದರಿಂದ ಅವರು ಮನೆಯಲ್ಲಿದ್ದು ಪ್ರಾರ್ಥನೆ ಮಾಡುವುದು ಉತ್ತಮ. 

 ಮುಂದಿನ ದಿನಗಳನ್ನು ಗಮನಿಸಿ ಭೋಜನ ಪ್ರಸಾದ- ತೀರ್ಥ ಪ್ರಸಾದ ಆರಂಭಿಸಲಾಗುವುದು. 

 ತುಪ್ಪ, ಎಳ್ಳೆಣ್ಣೆ ದೀಪಗಳನ್ನು ಬೆಳಗುವ ಬದಲು ಕೌಂಟರ್‌ನಲ್ಲಿ ಸಿಗುವ ಶುದ್ಧ ಎಳ್ಳನ್ನು ಪಡೆದು ಒಪ್ಪಿಸಬೇಕು. ಇದರಿಂದ ತಯಾರಿಸಿದ ಶುದ್ಧ ಎಳ್ಳೆಣ್ಣೆಯನ್ನು ಬಳಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next