Advertisement

ಶ್ರೀಕೃಷ್ಣ ಮಠದಲ್ಲಿ ಇನ್ನು ನಾಲ್ಕು ತಿಂಗಳು ವಿಭಿನ್ನ ಆಹಾರ

03:45 AM Jul 05, 2017 | Harsha Rao |

ಉಡುಪಿ: ಚಾತುರ್ಮಾಸ ವ್ರತದ ಆಹಾರ ಪದ್ಧತಿ ಉಡುಪಿ ಸಂಪ್ರದಾಯದ ಮಠಗಳಲ್ಲಿ ಆಷಾಢ ಮಾಸದ ದ್ವಾದಶಿಯಿಂದ ನಾಲ್ಕು ತಿಂಗಳು ಪರ್ಯಂತ ನಡೆಯಲಿದೆ. ಪ್ರಥಮನ ಏಕಾದಶಿಯಂದು ಉಪವಾಸವಿದ್ದು ತಪ್ತ
ಮುದ್ರಾಧಾರಣೆ ಮಾಡಿದ ಅನಂತರ ನಾಲ್ಕು ತಿಂಗಳಲ್ಲಿ ನಾಲ್ಕು ತರಹದ ಆಹಾರ ಕ್ರಮ ಸಂಪ್ರದಾಯದಂತೆ ನಡೆಯಲಿದೆ. ಇದು ಸಹಜವಾದ ಆಹಾರ ಕ್ರಮಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ.

Advertisement

ಮೊದಲ ತಿಂಗಳು ಶಾಕವ್ರತ
ಮೊದಲ ತಿಂಗಳ ಆಹಾರ ಕ್ರಮವನ್ನು ಶಾಕವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ತರಕಾರಿ ಬಳಸುವುದಿಲ್ಲ. ಮಾವು ಹೊರತಾಗಿ ಇತರ ಹಣ್ಣುಗಳನ್ನು ಬಳಸುವುದಿಲ್ಲ. ಪೊನ್ನಂಗೈ ಸೊಪ್ಪು, ತಿಮರೆ ಸೊಪ್ಪು, ಮಾವಿನಕಾಯಿ, ಪಾಪಡ್ಕ ಕಾಯಿಯನ್ನು ಬಳಸುತ್ತಾರೆ. ಹುಣಿಸೆಹುಳಿ ಬದಲು ಮಾವಿನಕಾಯಿಯನ್ನು, ಹಸಿ ಮೆಣಸು- ಒಣ ಮೆಣಸಿನ ಬದಲು ಕಾಳು ಮೆಣಸು ಬಳಸುತ್ತಾರೆ. ಇದಕ್ಕಾಗಿ ಮಾವಿನಕಾಯಿಯನ್ನು ಬೇಸಗೆಯಲ್ಲಿ ಒಣಗಿಸಿ ಇಟ್ಟು ಈಗ ಬಳಸುತ್ತಾರೆ. ಉದ್ದು, ಹೆಸರು ಬೇಳೆ ಹೊರತು ಪಡಿಸಿ ಇನ್ನಾವುದೇ ಬೇಳೆಯನ್ನು ಬಳಸುವುದಿಲ್ಲ. ಒಟ್ಟಿನಲ್ಲಿ ಬೇರು (ಭೂಮಿಯಡಿ ಬೆಳೆ
ಯುವಂಥದ್ದು), ಕಾಂಡ (ತರಕಾರಿಗಳು), ಪತ್ರ(ಪತ್ರೊಡೆಯಂತಹ ಖಾದ್ಯ ತಯಾರಿ ಎಲೆಗಳು), ಪುಷ್ಪ (ಗುಂಬಳ, ದಾಸವಾಳದಂತಹ ಹೂವು), ಹಣ್ಣುಗಳನ್ನು ಬಳಸುವುದಿಲ್ಲ. ಸಾರು, ಸಾಂಬಾರು, ಪಲ್ಯ, ಪಾಯಸಕ್ಕೆ ಹೆಸರು ಬೇಳೆ
ಮುಖ್ಯ. ಪಂಚಕಜ್ಜಾಯವನ್ನು ಹೆಸರುಬೇಳೆಯಿಂದ ಮಾಡಲಾಗುತ್ತದೆ. ಕಡಲೆ ಬೇಳೆ ಮಡ್ಡಿಯ ಬದಲು ಹೆಸರು ಬೇಳೆ ಮಡ್ಡಿ ಮಾಡುತ್ತಾರೆ.

2- 3ನೇ ತಿಂಗಳು ಕ್ಷೀರ ವ್ರತ, ದಧಿವ್ರತ
ಎರಡನೆಯ ತಿಂಗಳ ವ್ರತವನ್ನು ಕ್ಷೀರ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಹಾಲಿನ ಬಳಕೆ ಇಲ್ಲ. ಮೂರನೆಯ ತಿಂಗಳಿನ ವ್ರತವನ್ನು ದಧಿವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಮೊಸರನ್ನು ಬಳಸುವುದಿಲ್ಲ.

ನಾಲ್ಕನೇ ತಿಂಗಳು ದ್ವಿದಳ ವ್ರತ
ನಾಲ್ಕನೆಯ ತಿಂಗಳ ಆಹಾರ ಕ್ರಮವನ್ನು ದ್ವಿದಳ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಯಾವುದೇ ಬೇಳೆ, ಹಸಿ ಮೆಣಸು, ಒಣಮೆಣಸನ್ನು ಬಳಸುವುದಿಲ್ಲ. ಭೂಮಿಯಡಿ ಬೆಳೆಯುವ ಗಡ್ಡೆ ಗೆಣಸು, ಬಾಳೆ ದಿಂಡು, ಬಾಳೆಕಾಯಿ, ಬಾಳೆಕೂಂಬೆ ಬಳಸುತ್ತಾರೆ. ಹಣ್ಣುಗಳಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಕಾಳು ಮೆಣಸು ಖಾರಕ್ಕಾಗಿ, ಮಾವಿನಕಾಯಿ ಹುಳಿಗಾಗಿ ಬಳಸುತ್ತಾರೆ. ಈ ತಿಂಗಳಲ್ಲಿ ಅರಳಿನ ಚಿತ್ರಾನ್ನ, ಪಲ್ಯ, ಅವಲಕ್ಕಿಯ ಪಾಯಸ ಮಾಡುತ್ತಾರೆ. ಯಾವ ಬೇಳೆಯನ್ನೂ ಬಳಸುವುದಿಲ್ಲವಾದ ಕಾರಣ ರವೆಯ ಮಡ್ಡಿಯನ್ನು ಮಾಡುತ್ತಾರೆ. ಮೊದಲ ಮತ್ತು ಕೊನೆಯ ತಿಂಗಳಲ್ಲಿ ಗೋಡಂಬಿ, ದ್ರಾಕ್ಷಿ, ಲಾವಂಚ, ಏಲಕ್ಕಿಯಂತಹ ಪರಿಮಳ ದ್ರವ್ಯಗಳನ್ನು ಬಳಸುವುದಿಲ್ಲ. 

ಅಭ್ಯಾಸವಿಲ್ಲದವರಿಗೆ ಈ ವ್ರತಗಳ ಆಹಾರ ರುಚಿಸುವುದಿಲ್ಲ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳಿಗೆ ಎಂದಿನಂತೆ ಸಾರು, ಸಾಂಬಾರಿನ ಖಾದ್ಯಗಳನ್ನು ತಯಾರಿಸುತ್ತಾರೆ. ನೈವೇದ್ಯಕ್ಕಾಗಿ ವ್ರತದ ಆಹಾರವನ್ನು ತಯಾರಿಸುತ್ತಾರೆ ಮತ್ತು ಈ ಆಚಾರವನ್ನು ಪಾಲಿಸುವ ವ್ರತಧಾರಿಗಳು ಚಾತುರ್ಮಾಸ ವ್ರತದ ಆಹಾರವನ್ನು
ಬಳಸುತ್ತಾರೆ. ವಿಶೇಷವಾಗಿ ಸ್ವಾಮೀಜಿಯವರು, ಆಚಾರನಿಷ್ಠ ವಿದ್ವಾಂಸರು ವ್ರತದ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ನಾಲ್ಕೂ ತಿಂಗಳು ಒಂದು ಸ್ವಲ್ಪವೂ ತಪ್ಪದೆ ಈ ಆಹಾರಕ್ರಮ ಪಾಲಿಸುವ ಆಚಾರನಿಷ್ಠರೂ ಇದ್ದಾರೆ. ಆದರೆ ಸಂಖ್ಯೆಯಲ್ಲಿ ಇವರು ಕಡಿಮೆ. 

Advertisement

ಜು. 4ರಿಂದ ಚಾತುರ್ಮಾಸ ವ್ರತ ಆಹಾರ ಕ್ರಮ ಉಡುಪಿ ಸಂಪ್ರದಾಯದ ಎಲ್ಲ ಮಠಗಳಲ್ಲಿ ಆರಂಭಗೊಳ್ಳುತ್ತದೆ. ಸ್ವಾಮೀಜಿ ಯವರ ಚಾತುರ್ಮಾಸ ವ್ರತ (ಒಂದೆಡೆ ಕುಳಿತುಕೊಂಡು ಸಾಧನೆ ಮಾಡುವ) ಎರಡು ತಿಂಗಳಲ್ಲಿ ಮುಗಿದರೂ ಆಹಾರ ಕ್ರಮ ನಾಲ್ಕೂ ತಿಂಗಳು ಮುಂದುವರಿಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next