Advertisement

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

07:52 AM Aug 30, 2021 | Team Udayavani |

ಉಡುಪಿ: ಕಡೆ‌ಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಸೋಮವಾರ ಜನ್ಮಾಷ್ಟಮಿ ಸಂಭ್ರಮ. ಅಷ್ಟಮಿ ಅಂಗವಾಗಿ ನಗರದ ವಾಣಿಜ್ಯ ಮಳಿಗೆ ಬೀದಿಗಳಲ್ಲಿ ಹಬ್ಬದ ರಂಗೇರಿದ್ದು, ಶ್ರೀಕೃಷ್ಣ ಮಠದ ಮೊಸರು ಕುಡಿಕೆ ಉತ್ಸವಕ್ಕೆ ಗುರ್ಜಿಗಳನ್ನು ನೆಡಲಾಗಿದೆ.

Advertisement

ಸ್ಥಳೀಯವಾಗಿ ಸಿಗುವ ಹಿಂಗಾರದಿಂದ ಹಿಡಿದು ಪರಸ್ಥಳದ ಸೇವಂತಿಗೆ, ಮಾರಿಗೋಲ್ಡ್‌ ಮೊದಲಾದ ಹೂವುಗಳು ಮಾರುಕಟ್ಟೆಗೆ ಬಂದಿವೆ. ತಮಿಳುನಾಡು, ಹುಬ್ಬಳ್ಳಿ, ಚಿಕ್ಕಮಗಳೂರು ಹಾಸನ, ಹಾವೇರಿ ಸಹಿತ ವಿವಿಧೆಡೆಯ ವ್ಯಾಪಾರಿಗಳು  ಉಡುಪಿಗೆ ಕಾಲಿಟ್ಟಿದ್ದಾರೆ.

ಕೋವಿಡ್‌- 19 ಆತಂಕ, ಬಿರುಸುಗೊಂಡಿರುವ  ವರುಣನ ಅಬ್ಬರದ ನಡುವೆಯೂ ಶ್ರೀಕೃಷ್ಣ ಮಠದ  ರಥಬೀದಿ, ಚಿತ್ತರಂಜನ್‌ ಸರ್ಕಲ್‌, ಕೆಎಂ ಮಾರ್ಗ  ಸಹಿತ ನಗರದೆಲ್ಲೆಡೆ ಗ್ರಾಹಕರಿಗಾಗಿ ಕಾಯುತ್ತಿದ್ದಾರೆ.

ಪ್ರಮುಖ ವ್ಯಾಪಾರ ಕೇಂದ್ರ:

ರವಿವಾರ ಹಿನ್ನೆಲೆಯಲ್ಲಿ ನಗರದ ಚಿತ್ತರಂಜನ್‌ ಸರ್ಕಲ್‌, ಕೆಎಂ ಮಾರ್ಗ ಸರ್ವಿಸ್‌ ಬಸ್‌ ನಿಲ್ದಾಣ, ಕೃಷ್ಣಮಠದ ಪರಿಸರ, ಹಳೇ ಡಯಾನ ಸರ್ಕಲ್‌, ಬಸ್‌ ತಂಗುದಾಣದಲ್ಲಿ ಸಹಿತ ಹಲವು ಕಡೆಗಳಲ್ಲಿ ವ್ಯಾಪಾರಸ್ಥರು ಹೂವಿನ ವ್ಯವಹಾರ ನಡೆಸುತ್ತಿದ್ದಾರೆ. ಬೆಳಗ್ಗೆ ಮಾರಾಟ ನಿಧಾನಗತಿಯಲ್ಲಿತ್ತು. ಸಂಜೆ ವೇಳೆಗೆ ವ್ಯಾಪಾರ ಬಿರುಸಿನಿಂದ ನಡೆಯುತ್ತಿತ್ತು. ರಾತ್ರಿ ವೇಳೆಯ ರಶ್‌ ತಪ್ಪಿಸುವ ಸಲುವಾಗಿ ಹೆಚ್ಚಿನವರು ಸಂಜೆಯ ವೇಳೆಗೆ ಮಾರುಕಟ್ಟೆಯತ್ತ ಮುಖ ಮಾಡುತ್ತಿರುವುದು ಕಂಡುಬಂತು. ಅಲ್ಲಲ್ಲಿ ಟ್ರಾಫಿಕ್‌ ಜಾಂ ಸಮಸ್ಯೆ ಎದುರಾಗಿತ್ತು. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಸ್ತುಗಳ ಖರೀದಿಗೆ ತೊಂದರೆ ಉಂಟಾಗಿದೆ.

Advertisement

ಒಂದು ಮಾರು ಸೇವಂತಿಗೆ 100 ರೂ., ಕಾಕಡ 80 ರೂ., ಮಾರಿಗೋಲ್ಡ್‌ 150 ರೂ., ಗೊಂಡೆ 80 ರೂ., ಕನಕಾಂಬರ 80 ರೂ., ಬಾಳೆಹಣ್ಣು ಕೆ.ಜಿ.ಗೆ 60 ರೂ. ಇದೆ. ಕಳೆದ ವರ್ಷ ಕೊರೊನಾ ಕಾರಣಕ್ಕೆ ವ್ಯಾಪಾರ ಇರಲಿಲ್ಲ. ಈ ಬಾರಿಯೂ ವ್ಯಾಪಾರಿಗಳಲ್ಲಿ ಕೊರೊನಾ ಛಾಯೆ ಮಾತ್ರ ಕಡಿಮೆ ಆಗಿಲ್ಲ. ಆಟಿಕೆಗಳನ್ನು ಮಾರುವ, ವಿವಿಧ ಗೃಹ ಉಪಯೋಗಿ ಸಾಮಗ್ರಿಗಳನ್ನು ಮಾರುವವರ ದಂಡೂ ಸೇರುತ್ತಿದೆ. ಮೂಡೆ ಕೊಟ್ಟೆಗಳಿಗೂ ವಿಶೇಷ ಬೇಡಿಕೆ ಇದ್ದು  ಒಂದಕ್ಕೆ 10-12 ರೂ.ನಂತೆ ಮಾರಲ್ಪಟ್ಟವು.

ಮಾರಾಟಕ್ಕೆ  ಪೀಟ್ಲೆ :

ಕೃಷ್ಣಾಷ್ಟಮಿಗೆ ಪ್ರಸಿದ್ಧವಾದ ಪೀಟ್ಲೆ ಮಾರಾಟಕ್ಕೆ ಬಂದಿದೆ. ಈಗಿನ ಮಕ್ಕಳಿಗೆ ಈ ಆಟ ಮರೆತು ಹೋಗಿ ದ್ದರೂ ಸೋಮವಾರ ಮಾರಾಟಕ್ಕೆ ವೇಗ ದೊರಕಲಿದೆ.

ಮುದ್ದು ಕೃಷ್ಣ  ಸ್ಪರ್ಧೆ :

ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಸೇರುವುದು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಾಂಸ್ಕೃತಿಕ ಸ್ಪರ್ಧೆಗಳಾದ ಮುದ್ದು ಕೃಷ್ಣ ಸ್ಪರ್ಧೆ, ಛದ್ಮವೇಷ, ವೇದಿಕೆಯಲ್ಲಿ ನಡೆಯುವ ಹುಲಿವೇಷ ಸೇರಿದಂತೆ ಇತರ ವೇಷಗಳು ಸ್ಥಗಿತಗೊಂಡಿವೆ. ಆದರೆ ಉತ್ಸಾಹಿ ತಂಡಗಳು ಆನ್‌ಲೈನ್‌ ಮೂಲಕ ಮುದ್ದು ಕೃಷ್ಣ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿವೆ.

ನಗರದ ವಿವಿಧೆಡೆಯಲ್ಲಿ ಹೂವಿನ ಮಾರಾಟಕ್ಕೆಂದು ಹಾಸನದಿಂದ ಸುಮಾರು 15 ಮಂದಿ ಬಂದಿದ್ದೇವೆ. ಕೊರೊನಾ ಮಾರ್ಗಸೂಚಿ ಅನ್ವಯ ವ್ಯಾಪಾರ ಮಾಡುತ್ತಿದ್ದೇವೆ. ಈ ಬಾರಿ ಹೂವಿನ ಲಭ್ಯತೆ ಕಡಿಮೆಯಿದ್ದು, ಬೆಲೆ ಅಧಿಕವಾಗಿದೆ.– ಮಲ್ಲೇಶ್‌, ಹಾಸನದ ಹೂವಿನ ವ್ಯಾಪಾರಿ 

Advertisement

Udayavani is now on Telegram. Click here to join our channel and stay updated with the latest news.

Next