ಕಟಪಾಡಿ : ಅನಾರೋಗ್ಯ ಪೀಡಿತ 7 ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವಾಗಲು ಸಹಾಯ ಮಾಡಲು ರವಿ ಕಟಪಾಡಿ ಅಷ್ಟಮಿ ದಿನ ವೇಷಹಾಕಿ ಈ ಬಾರಿಯೂ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಕಳೆದ ಆರು ವರ್ಷದಲ್ಲಿ 72 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಈ ಬಾರಿ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ರವಿ ಪ್ರತ್ಯಕ್ಷ ಆಗಲಿದ್ದಾರೆ.
ಸಾಂಕ್ರಾಮಿಕ ಕೊರೋನಾ ನಡುವೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಬಂದಿದೆ. ಅದ್ದೂರಿ ಅಷ್ಟಮಿ ಆಚರಣೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ. ಅಷ್ಟಮಿ ದಿನ ಸಾವಿರಾರು ಜನ ವೇಷ ಧರಿಸುತ್ತಿದ್ದರು, ಆದರೆ ಈ ಬಾರಿಯೂ ಅದಕ್ಕೆ ಚಾನ್ಸ್ ಇಲ್ಲ. ವಿಭಿನ್ನ ಸಮಾಜಸೇವಕ ಉಡುಪಿಯ ರವಿ ಕಟಪಾಡಿಗೆ ಸ್ಪೆಷಲ್ ಅವಕಾಶ ಕೊಡಲಾಗಿದೆ.
ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನ ರವಿ ಉಡುಪಿ, ಕಟಪಾಡಿ, ಮಲ್ಪೆ, ಕಟಪಾಡಿ, ಮಣಿಪಾಲ ಭಾಗದಲ್ಲಿ ಓಡಾಡಲಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಕಳೆದ ಆರು ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು ಸುಮಾರು 33 ಮಕ್ಕಳಿಗೆ ನೀಡಿದ್ದಾರೆ. ಬಿಗ್ ಬಿ ನಡೆಸಿ ಕೊಟ್ಟಿದ್ದ ಕರೋಡ್ ಪತಿಯಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳಲ್ಲಿ ಬಂದ ಹಣದಲ್ಲಿ ಒಂದು ರೂಪಾಯಿಯನ್ನು ರವಿ ಇಟ್ಟುಕೊಂಡಿಲ್ಲ. ಆಗಸ್ಟ್ 30-31 ಎರಡು ದಿನ ರವಿ ಅನ್ನ ಆಹಾರ ಇಲ್ಲದೆ ಉಪವಾಸವಿದ್ದು ವೇಷ ಹಾಕುತ್ತಾರೆ. ಉಡುಪಿ, ಕಾಪು -ಮಲ್ಪೆ ವ್ಯಾಪ್ತಿಯಲ್ಲಿ ಓಡಾಡಿ ಧನಸಂಗ್ರಹ ಮಾಡಲಿದ್ದಾರೆ. ಸಂಗ್ರಹವಾಗುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ.