ಬೆಂಗಳೂರು: ನಗರದಲ್ಲಿ ಶುಕ್ರವಾರ ಶ್ರದ್ಧಾ, ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯು ಒಂದಾಗಿದ್ದು, ನಗರದ ಬಹುತೇಕ ಶಾಲೆಗಳು ಹಾಗೂ ಮನೆಗಳಲ್ಲಿ ಪುಟಾಣಿಗಳು ಕೃಷ್ಣ-ರಾಧೆ ವೇಷ ಧರಿಸಿ ಗಮನಸೆಳೆದರು.
ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದ ಶ್ರೀರಾಧಾ ಕೃಷ್ಣ ಮಂದಿರದಲ್ಲಿ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀರಾಧಾ ಕೃಷ್ಣರಿಗೆ ಅಭಿಷೇಕವನ್ನು ಬೆಳಗ್ಗೆ 6.30ಕ್ಕೆ ನೆರವೇರಿಸಿತು. ಇಡೀ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಜನೆ ಮತ್ತು ಕೀರ್ತನೆಗಳ ಗಾಯನ ನಡೆಯಿತು. ನಗರದ ಮನೆಗಳಲ್ಲಿ ಕೃಷ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ವಿವಿಧೆಡೆ ಸಂಘ ಸಂಸ್ಥೆಗಳಿಂದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ರಾಧಾ-ಕೃಷ್ಣ ವೇಷ ಭೂಷಣ ಸ್ಪರ್ಧೆ ಸಹ ಆಯೋಜಿಸಲಾಗಿತ್ತು.
ಇಸ್ಕಾನ್‌ನಲ್ಲಿ ಎರಡು ದಿನಗಳ ಕಾಲ ಜನ್ಮಾಷ್ಟಮಿ ನಡೆಯುತ್ತಿದ್ದು, ಮೊದಲ ದಿನವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ರಾಧಾಕೃಷ್ಣಚಂದ್ರ ಉತ್ಸವ ಮೂರ್ತಿಯನ್ನು ಚಿನ್ನ, ವಜ್ರಾಭರಣ, ನೇಯ್ಗೆಯುಳ್ಳ ಚಿತ್ತಾಕರ್ಷಕ ವಸ್ತುಗಳಿಂದ ಅಲಂಕರಿಸಲಾಗಿತ್ತು. ಜತೆಗೆ ಕೃಷ್ಣನಿಗೆ ಉಯ್ನಾಲೆ ಸೇವೆ, ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮಗಳು ದಿನವಿಡಿ ನಡೆದವು.
ದೇವಸ್ಥಾನದ ಗೋಶಾಲೆಯಲ್ಲಿ ನೂರಾರು ಭಕ್ತರಿಂದ ಗೋಪೂಜೆ ಮಾಡಲಾಯಿತು. ಬೆಳಗ್ಗೆ 8 ಗಂಟೆಗೆ ಗೋಸೇವೆ, ಅರ್ಚನೆ, ಪುಷ್ಪಾಂಜಲಿ ಮೂಲಕ ಕಾರ್ಯಕ್ರಮಗಳು ಆರಂಭವಾಗಿ ಸಂಜೆ ಐದು ಗಂಟೆಯವರೆಗೆ ಸಂಗೀತ ಸೇವೆ ಮತ್ತು ವಿಷ್ಣು ಸಹಸ್ರನಾಮ ಕಾರ್ಯಕ್ರಮಗಳನ್ನು ಜರುಗಿದವು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ವೇದಿಕೆಗಳನ್ನು ಕಲ್ಪಿಸಲಾಗಿತ್ತು.
80 ಸಾವಿರಕ್ಕೂ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶನ ಪಡೆದರು. ಇಸ್ಕಾನ್‌ನಲ್ಲಿ ಶನಿವಾರವೂ ದಿನವಿಡೀ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 10 ಗಂಟೆಗೆ ವಿಶೇಷ ಅಭಿಷೇಕ, 11.30ಕ್ಕೆ ವಿಡಿಯೋ ಪ್ರದರ್ಶನ ಹಾಗೂ ರಾತ್ರಿ 12ಕ್ಕೆ ಮಹಾಮಂಗಳಾರತಿ ನಡೆಯಲಿದೆ. 12.30ಕ್ಕೆ ಉತ್ಸವಕ್ಕೆ ತೆರೆಬೀಳಲಿದೆ.