Advertisement
ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸೋಮವಾರ ರಥಬೀದಿ ರಂಗುರಂಗಿನಿಂದ ಕಂಗೊಳಿಸುತ್ತಿತ್ತು. ಒಂದೆಡೆ ಬಗೆಬಗೆಯ ಪುಷ್ಪಗಳು ನೋಡುಗರ ಗಮನ ಸೆಳೆದರೆ ಇನ್ನೊಂದೆಡೆ ಬಣ್ಣಬಣ್ಣದ ಆಟಿಕೆಗಳು ಕಣ್ಣಿಗೆ ರಾರಾಜಿಸುತ್ತಿದ್ದವು. ಬಿಸಿಬಿಸಿ ತಿಂಡಿ ಸವಿಯುವವರಿಗಾಗಿ ಜೋಳ, ತಣ್ಣಗಿನ ಆಹಾರ ಸೇವಿಸುವವರಿಗಾಗಿ ಸೋಡಾ, ತಾಜಾ ಜ್ಯೂಸ್ ಅಂಗಡಿಯತ್ತ ಗ್ರಾಹಕರನ್ನು ಸೆಳೆಯುತ್ತಿದ್ದವು. ಹೂ, ಹಣ್ಣುಗಳ ರಾಶಿ ಕಂಡುಬಂದವು.
Related Articles
Advertisement
ಅಷ್ಟಮಿಯ ವಿವಿಧ ಬಗೆಯ ವೇಷಗಳನ್ನು ನೋಡಲು ದೂರದ ಊರಿನಿಂದ ಕಲಾಭಿಮಾನಿಗಳು ರಥಬೀದಿಗೆ ಬರುತ್ತಾರೆ. ಆದರೆ ಕೊರೊನಾದಿಂದ ಜನ್ಮಾಷ್ಟಮಿ ವೇಷ ಹಾಕುವುದಕ್ಕೆ ತಡೆಯಾಗಿದೆ. ಆದ್ದರಿಂದ ಈ ಬಾರಿ ರಥಬೀದಿಯಲ್ಲಿ ಇತರ ವೇಷಗಳು ಕಂಡುಬಂದಿಲ್ಲ. ಕೆಲ ಪೋಷಕರು ಹರಕೆ ನಿಮಿತ್ತ ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡು ಬಂತು. ಈ ಹಿಂದೆ ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ರಥಬೀದಿಯಲ್ಲಿ ನೂರಾರು ವೇಷಗಳು ಕಾಣಸಿಗುತ್ತಿತ್ತು.
ಟ್ರಾಫಿಕ್ ಜಾಮ್:
ಭಕ್ತರಿಗೆ ಸೋಮವಾರ ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸುಗಮ ವಾಹನ ಸಂಚಾರಕ್ಕೆ ಅಡಿಯಾಗಿತ್ತು. ಬೆಳಗ್ಗಿ ನಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ವಾಹನ, ಸಾರ್ವಜನಿಕರು ಓಡಾಡಲು ಹರಸಾಹಸಪಡುವಂತಾಗಿತ್ತು. ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ರಸ್ತೆ, ಆಭರಣ ಮಳಿಗೆ ಸಮೀಪ, ಚಿತ್ತರಂಜನ್ ಸರ್ಕಲ್, ಕೋರ್ಟ್ ರೋಡ್, ಕಲ್ಸಂಕ ಮಾರ್ಗದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
ಲಕ್ಷ ತುಳಸೀ ಅರ್ಚನೆ :
ಸೋಮವಾರ ಶ್ರೀಕೃಷ್ಣನಿಗೆ ಲಕ್ಷತುಳಸೀ ಅರ್ಚನೆ ನಡೆಯಿತು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸೀ ಅರ್ಚನೆ ನಡೆಸಿ ಮಹಾಪೂಜೆ ನಡೆಸಿದರು.
ಇದಕ್ಕೂ ಮುನ್ನ ಕೃಷ್ಣಾಪುರ, ಅದಮಾರು, ಪಲಿಮಾರು, ಕಾಣಿಯೂರು ಮಠಾಧೀಶರು ವಿವಿಧ ಪೂಜೆಗಳನ್ನು ಸಲ್ಲಿಸಿದರು. ರಾತ್ರಿ ಮಹಾಪೂಜೆ ಬಳಿಕದ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟುವ ಸಂಪ್ರದಾಯ ಬೆಳಗ್ಗಿನ ಮಹಾಪೂಜೆ ಬಳಿಕ ನಡೆಯಿತು. ಇದರಲ್ಲಿ ಅದಮಾರು, ಪಲಿಮಾರು ಉಭಯ ಮಠಾಧೀಶರು, ಕಾಣಿಯೂರು ಶ್ರೀಗಳು ಪಾಲ್ಗೊಂಡಿದ್ದರು.