Advertisement

ಫ್ಯಾಮಿಲಿ ಮ್ಯಾನ್ ನ ಶ್ರೀಕಾಂತ್ ತಿವಾರಿ ಹೊರಗಿನವನಲ್ಲ : ಮನೋಜ್ ಬಾಜಪೇಯಿ

02:16 PM Nov 24, 2021 | Team Udayavani |

ಬದುಕಿಗಿಂತ ದೊಡ್ಡದೆನಿಸುವ ಯಾವುದೇ ಪಾತ್ರಗಳನ್ನು ನಾನು ಪ್ರಯತ್ನಿಸುವುದಿಲ್ಲ. ಯಾಕೆಂದರೆ ನನಗೆ ವಾಸ್ತವದಲ್ಲೇ ಇರಲು ಬಹಳ ಇಷ್ಟ.ಯಾಕೆಂದರೆ ವಾಸ್ತವದ ನೆಲೆಯ ಪಾತ್ರಗಳು ಮಾತ್ರ ಇಡೀ ಜನಸಮೂಹವನ್ನು ಬೃಹತ್ ಮಟ್ಟಕ್ಕೆ ಪ್ರತಿನಿಧಿಸಬಲ್ಲದು ಎಂದವರು ಹಿಂದಿಯ ನಟ ಮನೋಜ್ ಬಾಜ್ ಪೇಯಿ.

Advertisement

ಇಫಿ ಚಿತ್ರೋತ್ಸವದ ‘ಕ್ರಿಯೇಟಿಂಗ್ ಕಲ್ಟ್ ಐಕಾನ್ಸ್ : ಇಂಡಿಯಾಸ್ ಜೇಮ್ಸ್ ಬಾಂಡ್ ವಿಥ್ ದಿ ಫ್ಯಾಮಿಲಿ ಮ್ಯಾನ್’ ಸಂವಾದದಲ್ಲಿ ಪಾಲ್ಗೊಂಡು, ಭಾರತದ ಮಧ್ಯಮ ವರ್ಗದ ಬದುಕೇ ಒಂದು ವಿನೋದದಂತೆ. ಅಲ್ಲಿನ ಪಾತ್ರಗಳೇ ನನಗೆ ನಿಜವಾದ ಸ್ಫೂರ್ತಿ ಎಂದರು.

ಫ್ಯಾಮಿಲಿ ಮ್ಯಾನ್ ಪಾತ್ರದ ಕುರಿತು ಕೇಳಿದಾಗಲೂ, ‘ನಾನೆಂದೂ ಶ್ರೀಕಾಂತ್ ತಿವಾರಿ (ಫ್ಯಾಮಿಲಿ ಮ್ಯಾನ್ ನ ಪಾತ್ರದ ಹೆಸರು ಎಂದು ಶೋಧನೆ ಮಾಡಲೇ ಇಲ್ಲ. ಕಾರಣ, ಆ ಪಾತ್ರ ನನ್ನೊಳಗಿತ್ತು. ನನ್ನ ಕುಟುಂಬ, ನನ್ನ ಸುತ್ತಲಿನ ಜಗತ್ತು ಹಾಗೂ ಎಲ್ಲರಲ್ಲೂ ಒಬ್ಬ ಶ್ರೀಕಾಂತ್ ತಿವಾರಿಯಿದ್ದ’ ಎಂದರು ಮನೋಜ್.
ಶ್ರೀಕಾಂತ್ ತಿವಾರಿಯ ಪಾತ್ರ ತನ್ನ ಉದ್ಯೋಗದ ಅಗತ್ಯ ಮತ್ತು ಕುಟುಂಬದ ಅಗತ್ಯಗಳ ನಡುವೆ ಒಂದು ಬಗೆಯ ಸಮತೋಲನ ಸಾಧಿಸಲು ಹೆಣಗುವ ವ್ಯಕ್ತಿ. ಒಟಿಟಿ ಯಲ್ಲಿ ಬಿಡುಗಡೆಯಾದ ಫ್ಯಾಮಿಲಿ ಮ್ಯಾನ್ ಸಾಕಷ್ಟು ಜನಪ್ರಿಯಗೊಳಿಸಿತ್ತು.

‘ಫ್ಯಾಮಿಲಿ ಮ್ಯಾನ್ ಒಬ್ಬ ಮಧ್ಯಮ ವರ್ಗದವನ ಕಥೆ. ಅವನು ಹೇಗೆ ಉದ್ಯೋಗ ಮತ್ತು ಕುಟುಂಬವನ್ನು ನಿಭಾಯಿಸಲು ಶ್ರಮಿಸುವವನ ಕಥೆ. ರಾಜ್ ಮತ್ತು ಡಿಕೆ ಸ್ಕ್ರಿಪ್ಟ್ ಜತೆಗೆ ನನ್ನಲ್ಲಿ ಚರ್ಚಿಸಿದಾಗ ಕಥೆಯ ಎಳೆಗೆ ನಾನು ಮಾರು ಹೋಗಿದ್ದೆ ಎಂದರು.

ಇಲ್ಲಿಂದ ಮಾತು ಬೆಳೆಸಿದ ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ನಿಡಿಮೂರು, ಕೃಷ್ಣ ಡಿ.ಕೆ., ನಮಗೆ ಇಡೀ ದೇಶದಲ್ಲಿ ಅನ್ವಯವಾಗುವಂಥ, ಪ್ರೇಕ್ಷಕರಿಗೆ ಹಿಡಿಸುವಂಥ, ಸಂವಹನ ಸಾಧ್ಯವಾಗುವಂಥ ಕಥೆಯನ್ನು ಸಿನಿಮಾ ಮಾಡಬೇಕೆಂದಿದ್ದೆವು. ನಮ್ಮನ್ನು ನಾವು ಒಂದು ಭಾಷೆ, ಒಂದು ಪ್ರದೇಶಕ್ಕೆ ಸೀಮಿತಗೊಳಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ನಿಜವಾದ ಖುಷಿ ಸಿಕ್ಕಿದ್ದೇ ಇದನ್ನು ಎಲ್ಲೆಡೆಗೂ ವಿಸ್ತರಿಸಿದಾಗ’ ಎಂದು ತಮ್ಮ ಅನುಭವ ಹಂಚಿಕೊಂಡರು.

Advertisement

ಇದಕ್ಕೆ ದನಿಗೂಡಿಸಿದವರು ನಟಿ ಸಮಂತಾ ರೂತ್ ಪ್ರಭು. ‘ರಾಜಿ ಪಾತ್ರ ನನಗೆ ತೀರಾ ಹೊಸತು. ಇದು ನನ್ನೊಳಗೇ ಇದ್ದ ಹೊಸತನ್ನು ಅನ್ವೇಷಿಸಲು ಅವಕಾಶ ಕಲ್ಪಿಸಿತು. ಇದೊಂದು ಸವಾಲಾಗಿತ್ತು. ಒಬ್ಬ ನಟಿಯಾಗಿ ಸವಾಲನ್ನು ತಿರಸ್ಕರಿಸಲು ಇಷ್ಟವಾಗಲಿಲ್ಲ’ ಎಂದರು.

‘ನಿಜ. ಒಟಿಟಿ ಗಳು ಹೆಚ್ಚು ಶಕ್ತವಾದ ಕಥೆ, ಪಾತ್ರಗಳನ್ನು ಬಯಸುತ್ತವೆ. ವೆಬ್ ಸೀರಿಸ್ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಏನೇ ಆದರೂ ನಿಯಂತ್ರಣ ಎಂಬುದು ಪ್ರೇಕ್ಷಕರ ಕೈಯಲ್ಲೇ ಇರುತ್ತದೆ’ ಎಂದು ಒಪ್ಪಿಕೊಂಡವರು ಸಮಂತಾ.

ಅಮೆಜಾನ್ ಪ್ರೈಮ್ ನ ಇಂಡಿಯಾ ಒರಿಜಿನಲ್ಸ್ ನ ಮುಖ್ಯಸ್ಥೆ ಅಪರ್ಣಾ ಪುರೋಹಿತ್, ‘ಐದು ವರ್ಷಗಳ ಹಿಂದೆ ಪ್ರತಿಯೊಬ್ಬ ಕಂಟೆಂಟ್ ನಿರ್ಮಿಸುವವರಲ್ಲಿ ಒಳ್ಳೆಯ ಕಥೆಯನ್ನು ಕೊಡಿ ಎಂದು ಕೇಳಿಕೊಂಡಿದ್ದೆವು. ಅದೀಗ ಫಲ ಕೊಡುತ್ತಿದೆ’ ಎಂದರು.ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ವಾರ್ತಾ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಚಿತ್ರತಂಡವನ್ನು ಗೌರವಿಸಿದರು. ಚಿತ್ರೋತ್ಸವ ನಿರ್ದೇಶಕ ಚೈತನ್ಯ ಪ್ರಸಾದ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next