Advertisement

ವೈಭವದ ಶ್ರೀಕಂಠನ ಪಂಚ ಮಹಾರಥೋತ್ಸವ

12:35 PM Apr 08, 2017 | Team Udayavani |

ನಂಜನಗೂಡು: ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಇಲ್ಲಿನ ಆರಾಧ್ಯದೈವ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮಗಳಿಂದ ನೆರವೇರಿತು. ಚೈತ್ರ ಮಾಸದ ಶುಕ್ರವಾರ ಬೆಳಗ್ಗೆ ಮೀನ ಲಗ್ನದಲ್ಲಿ ನಂಜುಂಡೇಶ್ವರನನ್ನು ಲಲಿತಾ ಚಂದ್ರಶೇಖರ ನಾಮಧೇಯದೊಂದಿಗೆ ರಥಾರೂಢನಾಗಿಸಿದ ಭಕ್ತರು 110 ಟನ್‌ ಬಾರದ 76 ಅಡಿ ಎತ್ತರದ ಭವ್ಯ ರಥವನ್ನು ಎಳೆಯುತ್ತ ರಥದಲ್ಲಿ ಪವಡಿಸಿದ ಭವರೋಗ ವೈದ್ಯನಿಗೆ ಹಣ್ಣು-ದವನ, ಧಾನ್ಯ ಎಸೆದು ಭಕ್ತಿ ಮೆರೆದರು.

Advertisement

ಚತುರ್ಮುಖ ಬ್ರಹ್ಮನನ್ನೇ ಸಾರಥಿಯನ್ನಾಗಿಸಿದ ರಥದ ಹಗ್ಗ ಹಿಡಿದು ಜಯಘೋಷದ ನಡುವೆ ಎಳೆದಾಗ ನಿಧಾನವಾಗಿ ಸಾಗಿದ ರಥ  ಮುಂದೆ ಸಾಗಿತು. ರಾಕ್ಷಸ ಮಂಟಪ ದಾಟಿ  ಚಾಮುಂಡಿಯ ದರ್ಶನಕ್ಕೆಂದು ವಾಡಿಕೆಯಂತೆ ಕೆಲ ಸಮಯ ಹಳೆ ಪೊಲೀಸ್‌ ಠಾಣೆಯ ಮುಂದೆ ವಿಶ್ರಮಿಸಿದ ಈ ರಥ ಮುಂದೆ ಸಾಗಿತು.

ಸ್ವಾಮಿಯವರ ರಥವನ್ನು ಹಿಂಬಾಲಿಸಿ ಬರುತ್ತಿದ್ದ ಪಾರ್ವತಿ ದೇವಿ ಪವಡಿಸಿದ ರಥ ಅದೇ ರಸ್ತೆಯಲ್ಲಿ ಪತಿಯ ರಥ ನಿಂತ ಸ್ಥಳಕ್ಕಿಂತ 100 ಅಡಿ ಹಿಂಭಾಗ ಗೋವಿಂದರಾಜ ಶೆಟ್ಟರ ಅಂಗಡಿ ಸಮೀಪ  ರಸ್ತೆ ಬಲಭಾಗದಲ್ಲಿ ಹೂತು ಇದೇ ಪ್ರಥಮ ಬಾರಿಗೆ ನಿಂತು ಇತಿಹಾಸ ಸೃಷ್ಟಿಸಿತು. ನಂತರ ರಥವನ್ನು 45 ನಿಮಿಷಗಳಲ್ಲಿ  ಕ್ರೇನ್‌ ಹಾಗೂ ಜೆಸಿಬಿ ಯಂತ್ರದ ಮೂಲಕ ಮತ್ತೆ ಮೇಲೆತ್ತಿದ ಭಕ್ತರು ರಥವನ್ನು ಸ್ವಸ್ಥಾನಕ್ಕೆ ಏರಿಸಿದರು.

ಬೆಳಗ್ಗೆ 5.30ಕ್ಕೆ ಆಗಮಿಕ ನಾಗಚಂದ್ರ  ದೀಕ್ಷೀತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರ ನೇತೃತ್ವದಲ್ಲಿ  ನಡೆದ ವೇದಘೋಷ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥಾರೂಢನಾಗಿರುವ ಶ್ರೀಕಂಠೇಶ್ವರನ ಗೌತಮ ರಥಕ್ಕೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಷಡಕ್ಷರಸ್ವಾಮಿ, ಜಿಲ್ಲಾಧಿಕಾರಿ ರಂದೀಪ್‌ ಪೂಜೆ ಸಲ್ಲಿಸಿ ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ  ರವಿ ಚಿನ್ನಣ್ಣನವರ್‌, ಜಿಪಂ ಸಿಇಒ ಶಿವಶಂಕರ್‌  ಉಪವಿಭಾಗಾಧಿಕಾರಿ ಆನಂದ, ತಹಶೀಲ್ದಾರ್‌ ದಯಾನಂದ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next