ಶ್ರೀ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮಠದೊಳಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ, ಒಳಗಿನ ಅಲಂಕಾರ, ನೈವೇದ್ಯ ಹಾಗೂ ಪ್ರಸಾದದ ರೂಪದಲ್ಲಿ ನೀಡುವ ಲಡ್ಡು, ಚಕ್ಕುಲಿ ಇತ್ಯಾದಿಗಳ ಸಿದ್ಧತೆ ಭರದಿಂದ ಸಾಗಿದೆ. ಆ. 26ರ ಬೆಳಗ್ಗೆಯಿಂದಲೇ ಶ್ರೀ ಕೃಷ್ಣಮಠದಲ್ಲಿ ಅಷ್ಟಮಿ ಸಂಭ್ರಮ ಡೋಲೋತ್ಸವದೊಂದಿಗೆ ಆರಂಭಗೊಂಡು ಆ.27ರ ವಿಟ್ಲಪಿಂಡಿ ಉತ್ಸವ ಮುಗಿಯುವರೆಗೂ ಇರಲಿದೆ.
Advertisement
ರಥಬೀದಿಯಲ್ಲಿ ನಾನಾ ಬಗೆಯ ಅಂಗಡಿ, ಮಾರಾಟ ಮಳಿಗಳನ್ನು ತೆರೆಯಲಾಗಿದೆ. ರಥಬೀದಿ ಸಹಿತವಾಗಿ ಉಡುಪಿ ನಗರದ ಮುಖ್ಯರಸ್ತೆಗಳು, ಮಣಿಪಾಲ, ಬ್ರಹ್ಮಾವರ, ಕಾಪು, ಕೋಟ, ಸಾಲಿಗ್ರಾಮ ಮೊದಲಾದ ಭಾಗದಲ್ಲಿ ಅಷ್ಟಮಿ ನಿಮಿತ್ತವಾಗಿ ವಿವಿಧ ಬಗೆಯ ಹೂವಿನ ಮಾರಾಟವೂ ಜೋರಾಗಿ ನಡೆಯುತ್ತಿದೆ. ಹೊರ ಜಿಲ್ಲೆಗಳ ಮಾರಾಟಗಾರರು ಅಲ್ಲಲ್ಲಿ ಹೂವಿನ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಪುರದ ಜನರಿಂದ ಖರೀದಿ ಪ್ರಕ್ರಿಯೆಯೂ ಜೋರಾಗಿ ನಡೆಯುತ್ತಿದೆ. ಕೃಷ್ಣಮಠಕ್ಕೆ ಆಗಮಿಸುವ ಭಕ್ತರು, ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.
40ಕ್ಕೂ ಅಧಿಕ ಬಾಣಸಿಗರು ಸೇರಿ ಗುಂಡಿಟ್ಟು ಲಡ್ಡು, ಎಳ್ಳುಲಡ್ಡು, ಕಡಲೆಹಿಟ್ಟಿನ ಲಡ್ಡು ಹೀಗೆ ಮೂರ್‍ನಾಲ್ಕು ಬಗೆಯ ತಲಾ 1 ಲಕ್ಷ ಲಡ್ಡು ಜತೆಗೆ 1 ಲಕ್ಷ ಚಕ್ಕುಲಿ ಸಿದ್ಧಪಡಿಸಿದ್ದಾರೆ. ಲಡ್ಡು ಮತ್ತು ಚಕ್ಕುಲಿಯನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಿಲು ಬೇಕಾದ ಪ್ಯಾಕಿಂಗ್ ವ್ಯವಸ್ಥೆಯನ್ನು ರವಿವಾರ ಬೆಳಗ್ಗೆಯಿಂದಲೇ ಮಾಡಲಾಗಿದೆ. ಇಂದು ವಿವಿಧ ಸ್ಪರ್ಧೆ
ಅಷ್ಟಮಿಯ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ಶ್ರೀ ಕೃಷ್ಣಮಠದ ಆವರಣದಲ್ಲಿ ಕಬಡ್ಡಿ ಸ್ಪರ್ಧೆ ನಡೆದಿದೆ. ಪೇಪರ್ ವೇಷ ಸಹಿತ ವಿವಿಧ ವೇಷಧಾರಿಗಳು ಈಗಾಗಲೇ ಮಠದ ಆವರಣ ಸಹಿತ ನಗರದಾದ್ಯಂತ ಸುತ್ತಾಟ ಆರಂಭಿಸಿದ್ದಾರೆ. ರಾಜಾಂಗಣದಲ್ಲಿ ರಂಗೋಲಿ ಸ್ಪರ್ಧೆಯೂ ನಡೆದಿದೆ. ಸೋಮವಾರ ಬೆಳಗ್ಗೆಯಿಂದಲೇ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ.
Related Articles
ಕೃಷ್ಣಾಷ್ಟಮಿಯೆಂದರೆ ಎಲ್ಲೆಡೆ ಹುಲಿವೇಷ, ವಿವಿಧ ವೇಷಗಳ ರಂಗು ಕಣ್ತುಂಬಿಕೊಳ್ಳಬಹುದು. ಈ ನಡುವೆ ಮಹಿಳಾ ಹುಲಿವೇಷಧಾರಿಗಳ ತಂಡ ವಿಶೇಷ ಗಮನ ಸೆಳೆಯಲಿದೆ. ದರ್ಪಣ ನೃತ್ಯ ಸಂಸ್ಥೆಯ ಬಾಲಕಿ, ಯುವತಿಯರು, ಮಹಿಳೆಯರು 2ನೇ ವರ್ಷವೂ ಹುಲಿವೇಷ ಹಾಕಿ ಗಮನ ಸೆಳೆಯಲಿದ್ದಾರೆ. ಮಾರ್ಪಳ್ಳಿ, ಅಲೆವೂರು, ನಿಟ್ಟೂರು, ಕೊರಂಗ್ರಪಾಡಿ, ಕಡಿಯಾಳಿ, ಕಾಡುಬೆಟ್ಟು, ಮಲ್ಪೆ, ಮಣಿಪಾಲ ಹುಡ್ಕೋ ಕಾಲನಿ ಸಹಿತ ಮೊದಲಾದ ಕಡೆಯ ಪ್ರಸಿದ್ಧ ಹುಲಿವೇಷ ತಂಡಗಳು ಅಬ್ಬರಿಸಲಿವೆ. ಇದಕ್ಕಾಗಿ ರಥಬೀದಿ ಸಹಿತ ನಗರದ ವಿವಿಧ ಭಾಗದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಹುಲಿ ಕುಣಿತಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.
Advertisement
ಡೋಲೋತ್ಸವಈ ವರ್ಷ ವಿಶೇಷ ಎಂಬಂತೆ ವಸಂತ ಮಂಟಪದಲ್ಲಿ ಡೋಲೋತ್ಸವ ಹೆಸರಿನಲ್ಲಿ ಕೃಷ್ಣನ ಮೂರ್ತಿ ಇರುವ ತೊಟ್ಟಿಲು ತೂಗಲು ಸೇವಾಕರ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟಮಿಯಂದು ಉಪವಾಸ ವ್ರತ ಇರಲಿದೆ. ಮಧ್ಯರಾತ್ರಿ ಅರ್ಘ್ಯ ಪ್ರದಾನಕ್ಕೆ ದೇವಸ್ಥಾನದ ಒಳಗೆ ಮತ್ತು ಹೊರಗೂ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳವಾರ ವಿಟ್ಲಪಿಂಡಿ ಉತ್ಸವ, ಭೋಜನಪ್ರಸಾದ ಇರಲಿದೆ.