ಶಿರಸಿಯ ಕಬ್ಬೆ ಗ್ರಾಮದ ಶ್ರೀಧರ ಗಂಗೇಮತ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಾಗಿ ಹಳ್ಳಿ ಹಳ್ಳಿಗೆ ಓಡಾಡುತ್ತಿದ್ದರು. ಅಲ್ಲಿನ ಕೃಷಿ, ರೈತರ ಪಾಡು, ಮಾರುಕಟ್ಟೆಯ ಸ್ಥಿತಿಗತಿ ಎಲ್ಲವನ್ನೂ ಗಮನಿಸಿ, ನಾನೂ ಏಕೆ ಕೃಷಿಕನಾಗಬಾರದು ಅಂತ ಕೃಷಿ ಕೆಲಸಕ್ಕೆ ಇಳಿದೇ ಬಿಟ್ಟರು. ಈಗ ನೋಡಿ, ಪ್ರತಿವಾರ ತರಕಾರಿ ಬೆಳೆ ತೆಗೆಯುತ್ತಾ ಖುಷಿಯಾಗಿದ್ದಾರೆ.
ಶಿರಸಿಯಿಂದ ಎಂಟು ಕಿ.ಮೀ ದೂರದಲ್ಲಿ ಕಬ್ಬೆ ಅನ್ನೋ ಊರು ಇದೆ. ಅಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಇವರು ತೊಂಡೆ ಕೃಷಿ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೇ ಸೊಪ್ಪು, ಇತರೆ ತರಕಾರಿಗಳೂ ಇವೆ.
ಇವರಲ್ಲಿ 54 ತೊಂಡೆ ಬಳ್ಳಿಗಳಿವೆ. ಇದರಿಂದ ವಾರಕ್ಕೆ ನಾಲ್ಕು ಸಾವಿರ ಸಿಗುತ್ತಿದೆ. ಬೆಂಡೆ ಕಾಯನ್ನು ಕೊಯ್ದು, ಎಳೆಯದರಲ್ಲೇ ಅದನ್ನು ಮಾರಾಟ ಮಾಡುತ್ತಾರೆ.
ಶ್ರೀಧರ ತರಕಾರಿ ಬೆಳೆಯಲು ಭೂಮಿ ಸಿದ್ಧಗೊಳಿಸಿದ ಬಗೆಯೂ ವಿಶಿಷ್ಟವಾಗಿತ್ತು. ಮೊದಲು ಅದು ಹೇಗೆಂದರೆ, ಎರಡೂವರೆ ಅಡಿ ಆಳದ ಗುಂಡಿ ತೋಡಿ, ಗೊಬ್ಬರ, ಸೊಪ್ಪು ಹಾಕಿ ತೊಂಡೆ ಬೆಳೆಯಲು ಆರಂಭಿಸಿದರು. ತಿಂಗಳಲ್ಲೇ ವಾರಕ್ಕೆ ಕೆ.ಜಿ ತೊಂಡೆ ಕಾಯಿ ಕೋಯ್ದ ಇವರೀಗ ಈಗ ತೊಂಡೆ ಶ್ರೀಧರ ಅಂತಲೇ ಹೆಸರಾಗಿದ್ದಾರೆ. ವಾರಕ್ಕೆ ಮೂವತ್ತರಿಂದ ನಲವತ್ತು ಕೆಜಿ ತೊಂಡೆಕಾಯಿ ದೊರೆಯುತ್ತಿದೆ. ಒಂದು ಕೆ.ಜಿ ತೊಂಡೆಕಾಯಿಗೆ ನಲವತ್ತು ರೂಪಾಯಿ ಸಿಗುತ್ತಿದೆ. ಇದಕ್ಕಾಗಿ ನಿರ್ವಹಣೆ, ಹನಿ ನೀರಾವರಿ, ಗೊಬ್ಬರ ಸೇರಿ 3 ಸಾವಿರ ರೂ. ಖರ್ಚು. ಉಳಿದ ಮೂರು ವಾರದ ಆದಾಯ ಲಾಭ ಎನ್ನುತ್ತಾರೆ ಶ್ರೀಧರ.
ತರಕಾರಿ ಬೆಳೆಯ ವಿಸ್ತಾರದ ಕನಸು ಹೊತ್ತು ಕೆಲಸ ಮಾಡುತ್ತಿರುವ ಶ್ರೀಧರ, ಮನೆಯ ಹಿಂಭಾಗದಲ್ಲಿಯೇ ಮಲ್ಲಿಗೆ ಗಿಡವನ್ನು ನೆಟ್ಟಿದ್ದು, ಅವರಲ್ಲಿ ಕೂಡಾ ಹೂ ಅರಳಿ ನಿಂತಿದೆ. ಮಲ್ಲಿಗೆ ಕೊಯ್ಲು ಮಾಡಿ ದಿನವೂ ಹತ್ತು ಮಾರು ಮಾರಾಟ ಮಾಡುತ್ತಿದ್ದಾರೆ. ಒಂದು ಮಾರು ಹೂವಿಗೆ ಹದಿನೈದು ರೂಪಾಯಿ ಸಿಗುತ್ತಿದೆ. ಪತ್ನಿ ನಿರ್ಮಲಾ, ಮನೆ ಮಕ್ಕಳು ಮಲ್ಲಿಗೆ ಮಾಲೆ ಮಾಡಲು ಸಹಕಾರ ನೀಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಗಂಡ ಹೆಂಡತಿ ಶ್ರಮವಹಿಸಿ ದುಡಿಯುವದಲ್ಲದೇ ಮಾರಾಟಕ್ಕೆ ಶಿರಸಿ ಪೇಟೆಗೆ ಬಂದು ಗ್ರಾಹಕ ಇದ್ದಲ್ಲೇ ಕೊಟ್ಟು ಹೋಗುತ್ತಾರೆ. ವಾರಕ್ಕೆ ಎರಡು, ಮೂರು ದಿನ
ವ್ಯಾಟ್ಸ್ ಅಪ್ ಗಳಲ್ಲಿ ಮೆಸೇಜ್ ಹಾಕಿ, ಅಗತ್ಯವುಳ್ಳವರ ಬೇಡಿಕೆಯನ್ನು ಪೂರೈಸುತ್ತಾರೆ.ಕುಟುಂಬಕ್ಕೆ ತರಕಾರಿ ಹೂವು ಬದುಕು ಅರಳಿಸಿದೆ. ಶಿರಸಿ ಸೀಮೆ ಗ್ರಾಹಕರ ಮನೆಗೇ ತಲುಪಿಸಲು 9731550279 ಮೆಸೇಜ್ ಮಾಡಿದರೂ ತರಕಾರಿ ಜೊತೆ ಶ್ರೀಧರ ಹಾಜರ್ ಆಗುತ್ತಾರೆ.
– ರಾಘವೇಂದ್ರ ಬೆಟ್ಟಕೊಪ್ಪ