Advertisement

ಹಿಂದೂ ರಾಷ್ಟ್ರ ಸ್ಥಾಪನೆಗೆ ಶ್ರೀಧರ ಸ್ವಾಮೀಜಿ ಪ್ರೇರಕ; ಧರ್ಮಜಾಗೃತಿ-ದೇವಾಲಯ ನಿರ್ಮಾಣ

04:39 PM Feb 13, 2023 | Team Udayavani |

ಹೊನ್ನಾವರ: ದೇಶದ ಆಧ್ಯಾತ್ಮ ಲೋಕದಲ್ಲಿ ತನ್ನದೇ ಆದ ಪ್ರಭಾವ ಬೀರಿ ಬ್ರಹೈಕ್ಯರಾದ ಶ್ರೀ ಶ್ರೀಧರ ಸ್ವಾಮಿಗಳು ಮಹಾಸಮಾ ಧಿಯಾಗಿ ಏಪ್ರಿಲ್‌ 8ಕ್ಕೆ 50 ವರ್ಷಗಳಾಗುತ್ತವೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರೇರಕರಾಗಿದ್ದರು ಎಂದು ನಂಬಲಾದ ಸಜ್ಜನಗಡದ ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಅವತಾರ ಎಂದು ಶ್ರೀಧರ ಸ್ವಾಮಿಗಳನ್ನು ಭಕ್ತರು ಆರಾಧಿಸುತ್ತಾರೆ.

Advertisement

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿ ಚಾತುರ್ಮಾಸ್ಯ ಆಚರಿಸಿ ಧರ್ಮಜಾಗೃತಿ, ದೇವಾಲಯ ನಿರ್ಮಾಣ ಮತ್ತು ಆಧ್ಯಾತ್ಮ ಪ್ರವಚನಗಳಿಂದ ಪ್ರಸಿದ್ಧರಾಗಿದ್ದರು. ಲೋಕದ ಹೆಣ್ಣುಮಕ್ಕಳನ್ನೆಲ್ಲಾ ತಾಯಂದಿರಂತೆ ಕಾಣುತ್ತೇನೆ, ಹಣವನ್ನು ಎಂದಿಗೂ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಶ್ರೀಧರ ಸ್ವಾಮಿಗಳು ಜೀವಿತದ ಕೊನೆಯ ತನಕ ಹಾಗೇ ನಡೆದುಕೊಂಡರು. ಶ್ರೀಧರ ಸ್ವಾಮಿಗಳ ಮಹಾಸಮಾಧಿಯಾಗಿ ದಿನಕಳೆದಂತೆ ಪ್ರಭಾವ ಹೆಚ್ಚುತ್ತ
ನಡೆದಿದೆ. ವರದಹಳ್ಳಿಯ ಶ್ರೀಧರಾಶ್ರಮ ಶ್ರೀಧರರ ತತ್ವ ಹಾಗೂ ಸಂದೇಶದಂತೆ ನಡೆಯುತ್ತಿದೆ. ಮಹಾಸಮಾಧಿಯ ಪರಿಸರದಲ್ಲಿ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು ಒಂದು ಯಾತ್ರಾಸ್ಥಳವಾಗಿ ಸಾಗರದ ವರದಪುರ ಬೆಳೆದಿದೆ. ಮಹಾಸಮಾಧಿಯ 50ನೇ ವರ್ಷದ ಅಂಗವಾಗಿ ವರದಹಳ್ಳಿಯಲ್ಲಿ 10ದಿನಗಳ ಕಾರ್ಯಕ್ರಮ ಸಂಯೋಜನೆಯಾಗಿದೆ.

ಶ್ರೀಧರಾಶ್ರಮದಲ್ಲಿ, ಶ್ರೀಧರರ ಸಂಚಾರದಲ್ಲಿ ಸುಮಾರು ಮೂರು ದಶಕಗಳ ಕಾಲ ಅವರ ಜೊತೆಗಿದ್ದು ಅವರ ಸೇವೆಯನ್ನು, ದೇವರ ಸೇವೆಯನ್ನು ಮಾಡುತ್ತಿದ್ದ ಹೊನ್ನಾವರ ಗಾಣಗೆರೆ ಮೂಲದ ಜನಾರ್ಧನ ರಾಮದಾಸಿ ಮತ್ತು ಸಿದ್ದಾಪುರದ ಜಾನಕಮ್ಮ ಇವರು ಶ್ರೀಧರರು ಇಹಲೋಕ ತ್ಯಜಿಸಿದ ಮೇಲೆ ಹೊನ್ನಾವರ ರಾಮತೀರ್ಥಕ್ಕೆ ಬಂದು ಆಶ್ರಮ ಕಟ್ಟಿಕೊಂಡು ಗುರುಪೂರ್ಣಿಮೆ ಮತ್ತು ದತ್ತಜಯಂತಿಯ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು
ನಡೆಸುತ್ತ ಬಂದಿದ್ದಾರೆ. ಇದಕ್ಕಿಂತ ಮಹತ್ವವಾದ ಅಪೂರ್ವ ಎನ್ನಬಹುದಾದ ಸಾಧನೆಯನ್ನು ರಾಮತೀರ್ಥದ ಶ್ರೀಧರ ನಿವಾಸ ಮಾಡಿದೆ. ಶ್ರೀಧರರು ಚಾತುರ್ಮಾಸ್ಯ ವೃತವನ್ನು ನಾಲ್ಕು ತಿಂಗಳ ಪೂರ್ತಿ ಆಚರಿಸುತ್ತಿದ್ದರು. ಅನ್ನಾಹಾರಗಳನ್ನು ಬಿಟ್ಟು ದಿನಕ್ಕೊಂದು ಬಾರಿ ಉಪಹಾರ ಮಾತ್ರ ಸೇವಿಸಿ ಹಗಲುರಾತ್ರಿ ಎನ್ನದೆ ಏಕಾಂತದಲ್ಲಿ ತಪಸ್ಸಿನಲ್ಲಿರುತ್ತಿದ್ದರು.

ಆಗ ಅವರ ಬಾಯಿಯಿಂದ ಹೊರಬಂದ ವಿಚಾರಗಳನ್ನು ಮತ್ತು ಅವರು ವಿಶೇಷ ದಿನಗಳಲ್ಲಿ ಮಾಡಿದ ಆಶೀರ್ವಚನ ಮತ್ತು ಪ್ರವಚನಗಳನ್ನು ಧ್ವನಿಮುದ್ರಣದಲ್ಲಿ ದಾಖಲಿಸಿಟ್ಟುಕೊಂಡ ಜನಾರ್ಧನ ಅವರು ಅವುಗಳನ್ನು ಹಿರಿಯ ವಿದ್ವಾಂಸರಾದ ಸೋತಿ. ನಾಗರಾಜರಾವ್‌ ಮತ್ತು ಅವರ ಶಿಷ್ಯರ ಸಹಕಾರದಲ್ಲಿ ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ. ಧ್ವನಿ ಮುದ್ರಣವನ್ನು ಯಥಾವತ್ತಾಗಿ ಕೈಯಿಂದ ಬರೆದು ಅವುಗಳನ್ನು ದೋಷರಹಿತವಾಗಿ ಮುದ್ರಿಸಿ ಪ್ರಕಟಿಸಲಾಗಿದೆ. ಈಗಾಗಲೇ 16ಕ್ಕೂ ಹೆಚ್ಚು ಕನ್ನಡ, 4 ಇಂಗ್ಲಿಷ್‌, 4ಮರಾಠಿ ಅನುವಾದಗಳು ಪ್ರಕಟವಾಗಿದ್ದು ಎಲ್ಲವೂ ಪುನಃಮುದ್ರಣಕ್ಕೆ ಸಜ್ಜಾಗಿದೆ.

ವಾಲ್ಮೀಕಿ ರಾಮಾಯಣ ಬರೆದು, ವ್ಯಾಸರು ಮಹಾಭಾರತ ಬರೆದು ಆ ಮಹಾಪಾತ್ರಗಳನ್ನು ಶಾಶ್ವತಗೊಳಿಸಿದ್ದಾರೆ. ಇಂದು ರಾಮನಿಲ್ಲ, ಕೃಷ್ಣನಿಲ್ಲ, ಕೃತಿಗಳೇ ರಾಮನನ್ನೂ, ಕೃಷ್ಣನನ್ನೂ ಅರಿಯಲು, ಆರಾಧಿ ಸಲು ಕಾರಣವಾಗಿದೆ. ಜನಾರ್ಧನ ಅವರು ಶ್ರೀಧರ ಸ್ವಾಮಿಗಳ ಎಲ್ಲ ಪ್ರವಚನಗಳನ್ನು ಕೃತಿರೂಪದಲ್ಲಿ ಪ್ರಕಟಿಸಿರುವ ಕಾರಣ ಇನ್ನೂ ಬಹುಕಾಲ ಶ್ರೀಧರರನ್ನು ಅರಿಯಲು ಸಾಧ್ಯವಾಗುತ್ತದೆ. ರಾಮತೀರ್ಥದಲ್ಲಿ ಎಪ್ರಿಲ್‌ 8ರ ನಾಲ್ಕು ದಿನ ಧಾರ್ಮಿಕ ಕಾರ್ಯಕ್ರಮಗಳು, ಪಾದುಕೆಗಳಿಗೆ ಗಂಗಾಭಿಜಲಾಭಿಷೇಕ, ಮಹಾರುದ್ರ ಕಾರ್ಯಕ್ರಮಗಳಿದ್ದು ಕೊನೆ ಪುಸ್ತಕವಾಗಿ ಶ್ರೀಧರರು ರಚಿಸಿದ ಶ್ಲೋಕಗಳ ಪುಸ್ತಕ ಮತ್ತು ಒಂದು ಸ್ಮರಣ ಸಂಚಿಕೆ ಪ್ರಕಟವಾಗಲಿದೆ.

Advertisement

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next