ವಾಡಿ: ಗೋ ಸಂತತಿ ಉಳಿಯದಿದ್ದರೆ ಸಾವಯವ ಗೊಬ್ಬರ ಕಣ್ಮರೆಯಾಗಿ ಕೃಷಿಗೆ ಗಂಡಾಂತರ ಎದುರಾಗುತ್ತದೆ. ಆದ್ದರಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿ ಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.
ವಾಹನವೊಂದರಲ್ಲಿ ಶನಿವಾರ ಬೆಳಗ್ಗೆ ಖಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ನಾಲ್ಕು ಗೋವುಗಳನ್ನು ಸನ್ನತಿ ಸಮೀಪದ ರಸ್ತೆಯಲ್ಲಿ ತಡೆದು, ಅವುಗಳನ್ನು ಶಹಾಪುರದ ಪುಣ್ಯಕೋಟಿ ಗೋ ಶಾಲೆಗೆ ಕಳುಹಿಸಿದ ನಂತರ ಸುದ್ದಿಗಾರರಿಗೆ ಅವರು ಮಾತನಾಡಿದರು.ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಗೋಮಾಂಸ ಮಾರಾಟ ದಂಧೆಗೆ ಕಡಿವಾಣ ಬಿದ್ದಿಲ್ಲ.
ಹೀಗಾಗಿ ಕೃಷಿಗೆ ಆಧಾರ ಸ್ತಂಭವಾಗಿರುವ ಎತ್ತುಗಳು, ಹೈನುಗಾರಿಕೆಗೆ, ಸಾವಯವ ಗೊಬ್ಬರ ಉತ್ಪಾದನೆಗೆ ಕಾರಣವಾಗಿರುವ ಗೋ ಸಂತತಿ ದಿನೇದಿನೆ ಅಳಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹಸುಗಳ ಸಂತತಿ ಉಳಿಯದಿದ್ದರೆ ಪೌಷ್ಟಿಕ ಆಹಾರವಾದ ಹಾಲು, ಮೊಸರು, ತುಪ್ಪ ಇನ್ನು ಮುಂದೆ ಗಗನಕುಸುಮ ಆಗಲಿದೆ. ಈ ಆತಂಕದಿಂದಲೇ ಶ್ರೀ ಮಠದ ವತಿಯಿಂದ ನಿರಂತರವಾಗಿ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ.
ವಾಹನಗಳಲ್ಲಿ ನೀರು, ಮೇವು, ವೈದ್ಯಕೀಯ ಪ್ರಮಾಣಪತ್ರ, ಕೃಷಿ ಅ ಧಿಕಾರಿಗಳ ಪರವಾನಗಿ ಇಲ್ಲದೇ ಹಿಂಸಾತ್ಮಕವಾಗಿ ಗೋವುಗಳನ್ನು ಕಳ್ಳ ಮಾರ್ಗದಿಂದ ಖಸಾಯಿಖಾನೆ ಸಾಗಿಸಲಾಗುತ್ತಿದೆ. ಪೊಲೀಸರು ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೊಂದು ಉತ್ಸಾಹಿ ಯುವಕರ ತಂಡವುಳ್ಳ ಗೋರಕ್ಷಕ ಸೇನೆ ರಚಿಸಲು ತೀರ್ಮಾನಿಸಿದ್ದೇನೆ. ಈ ಮೂಲಕ ಸವಿತಾ ಪೀಠ ಗೋರಕ್ಷಣೆಗೆ ಬದ್ಧವಾಗಿದೆ. ರೈತರು ತಮ್ಮ ಗೋವುಗಳನ್ನು ಖಸಾಯಿಖಾನೆಗೆ ನೀಡಬಾರದು. ಸಾಕಲು ಸಾಧ್ಯವಾಗದಿದ್ದರೆ ಕೊಂಚೂರು ಹರಿಪ್ರೀಯಾ ಗೋಶಾಲೆಗೆ ತಂದು ಬಿಡಬಹುದು ಎಂದು ಮನವಿ ಮಾಡಿದರು.