ಕುಂದಾಪುರ: ಭಾರತೀಯ ಸೇನೆಗೆ ಅಗ್ನಿಪಥ್ ಯೋಜನೆಯಲ್ಲಿ 100 ಅಗ್ನಿವೀರ್ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ದೇಶಾದ್ಯಂತದಿಂದ ಒಟ್ಟು ಅರ್ಜಿ ಹಾಕಿದ 2.5 ಲಕ್ಷ ಜನರಲ್ಲಿ ಆಯ್ಕೆಯಾದ “ಮಹಿಳಾ ಸೇನಾ ಪೊಲೀಸ್’ ಏಕೈಕ ಕನ್ನಡತಿ ಶ್ರೀದೇವಿ ಹೊಸಂಗಡಿ ಅವರು ಕುಂದಾಪುರ ತಾಲೂಕಿನವರು.
“ಅಗ್ನಿವೀರ’ರಿಗೆ ಬೆಂಗಳೂರಿನ ವೀರಸಂದ್ರದ ಸಿಎಂಪಿ ಸೆಂಟರ್ ಆ್ಯಂಡ್ ಸ್ಕೂಲ್ ಮಿಲಿಟರಿ ಟ್ರೈನಿಂಗ್ ಕ್ಯಾಂಪಸ್‌ನಲ್ಲಿ ತರಬೇತಿ ಆರಂಭಿಸಲಾಗಿದೆ. ಇಲ್ಲಿ 31 ವಾರಗಳ ಕಾಲ ತರಬೇತಿ ನಡೆಯಲಿದ್ದು, ಬಳಿಕ ಸೇನೆ ಸೇವೆಗೆ ನಿಯೋಜಿಸಲಾಗುತ್ತದೆ.
4 ವರ್ಷಗಳ ಸೇವೆಯ ಬಳಿಕ ಶೇ. 25 ಮಂದಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ಇದೆ. ಹಾಗಾಗಿ ಸೇನೆಗೆ ಸೇರಿ ಮುಂದುವರಿಯುವ ಹುಮ್ಮಸ್ಸು ಶ್ರೀದೇವಿಯಲ್ಲಿ ಇದೆ. ಒಂದೊಮ್ಮೆ ಆಗದೇ ಇದ್ದರೂ ಸೇವಾನಿಧಿ ಪ್ಯಾಕೇಜ್ ದೊರೆಯಲಿದೆ. ದೇಶಸೇವೆಗೆ ಸಿಕ್ಕಿದ ಅವಕಾಶದ ಸದ್ಬಳಕೆ ಕಡೆಗೆ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಶ್ರೀದೇವಿ. ಜತೆಗೆ, ಅಗತ್ಯವುಳ್ಳ ಪರೀಕ್ಷೆ ಬರೆದು ಸೇನೆಯಲ್ಲಿ ಅಧಿಕಾರಿ ಹಂತವೇರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಸೇನಾ ಹಿನ್ನೆಲೆ ಇಲ್ಲ
ಹೊಸಂಗಡಿಯ ಮುತ್ತಿನ ಕಟ್ಟೆ ಗೇರುಬೀಜ ಕಾರ್ಖಾನೆ ಬಳಿಯ ನಿವಾಸಿ ಶ್ರೀಕಾಂತ್ ಗೊಲ್ಲ -ಶಿಲ್ಪಾ ಅವರ ಪುತ್ರಿ ಶ್ರೀದೇವಿ ಬಾಲ್ಯದಿಂದಲೂ ಸೇನೆಗೆ ಸೇರುವ ಕನಸು ಕಂಡವರು. ಕೂಲಿ ಕಾರ್ಮಿಕರಾದ ತಂದೆ, ಗೃಹಿಣಿ ತಾಯಿ, ಸಿವಿಲ್ ಮತ್ತು ಮೆಕ್ಯಾನಿಕಲ್ ಡಿಪ್ಲೋಮಾ ಎಂಜಿನಿಯರ್‌ಗಳಾದ ಸಹೋದರರು. ಹೀಗೆ ಸೇನಾ ಹಿನ್ನೆಲೆ ಇಲ್ಲದಿದ್ದರೂ ಸೇನೆಗೆ ಸೇರಲು ಇಂಬು ನೀಡಿದ್ದು, ಧೈರ್ಯ- ತರಬೇತಿ ಕೊಟ್ಟದ್ದು ಎನ್‌ಸಿಸಿ.
Related Articles
ಎನ್‌ಸಿಸಿ ಕೆಡೆಟ್
ಶ್ರೀದೇವಿ ಹೊಸಂಗಡಿ ಸರಕಾರಿ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಅಧ್ಯಯನ ಆರಂಭಿಸಿ ಕ್ರೀಡಾ ಕೋಟಾದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದರು. ಸೇನೆಗೆ ಸೇರಬೇಕೆಂಬ ಬಯಕೆಯಿಂದ ಎನ್‌ಸಿಸಿ ಕೆಡೆಟ್ ಆದರು. ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿ ಕೆಎಎಸ್ ತರಬೇತಿಗೆ ಧಾರವಾಡಕ್ಕೆ ಹೋದರು. ಅಗ್ನಿಪಥ್ ಯೋಜನೆ ಘೊಷಣೆಯಾದಾಗ ಅರ್ಜಿ ಹಾಕಿದರು. ವುಮೆನ್ ಮಿಲಿಟರಿ ಪೊಲೀಸ್ ಹುದ್ದೆಗೆ ಅರ್ಜಿ ಹಾಕಿದ ದೇಶದ ಒಟ್ಟು 2.5 ಲಕ್ಷ ಜನರ ಪೈಕಿ 100 ಮಂದಿ ಯುವತಿಯರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ಏಕೈಕ ಕನ್ನಡತಿ ಶ್ರೀದೇವಿ ಹೊಸಂಗಡಿ.
ಅಭಿಮಾನದ ಹೊಳೆಯೇ ಹರಿದು ಬರುತ್ತಿದೆ. ಸಂತಸದ ಹಾಗೂ ಹೆಮ್ಮೆಯ ಕ್ಷಣ ಇದು. ಯಾವುದೇ ಸಮಸ್ಯೆ ಆಗುತ್ತಿಲ್ಲ. ತರಬೇತಿದಾರರು ಉತ್ತಮವಾಗಿ ಮಾಹಿತಿ ನೀಡುತ್ತಿದ್ದಾರೆ. ಸೇನೆಯಲ್ಲೇ ಮುಂದುವರಿಯಲು ಅಗತ್ಯವುಳ್ಳ ಪರೀಕ್ಷೆ ಬರೆಯುತ್ತೇನೆ.
– ಶ್ರೀದೇವಿ ಹೊಸಂಗಡಿ ಅಗ್ನಿವೀರ್
– ಲಕ್ಷ್ಮೀ ಮಚ್ಚಿನ