ಮಂಗಳೂರು: ಕೆಂಜಾರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶನಿವಾರ 14ನೇ ವರ್ಷದ ಎಂಜಿನಿಯರಿಂಗ್, ಎಂಬಿಎ ಹಾಗೂ ಎಂಸಿಎ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಮತ್ತು ರ್‍ಯಾಂಕ್ ವಿಜೇತರಿಗೆ ಸಮ್ಮಾನ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ್ ಅಮೀನ್ ಮಾತನಾಡಿ, ಪದವಿ ಪಡೆಯುವುದು ಎಂದರೆ ವೃತ್ತಿ ಜೀವನದ ಆರಂಭ. ಜೀವನದಲ್ಲಿ ಯಶಸ್ವಿಯಾಗಲು ಕಲಿಕೆಯ ಪ್ರಕ್ರಿಯೆ ನಿರಂತರವಾಗಿರಬೇಕು. ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು ಎದುರಿಸಿ ಭದ್ರ ಬುನಾದಿ ಹಾಕಬಲ್ಲ ವ್ಯಕ್ತಿಯೇ ಯಶಸ್ವಿ ವ್ಯಕ್ತಿ. ಜೀವನದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿ ಮತ್ತು ಗುರಿ ಸಾಧಿಸಲು ಶ್ರಮಿಸುವಂತೆ ತಿಳಿಸಿದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ನಿಧೀಶ್‌ಎಸ್. ಶೆಟ್ಟಿ, ಟ್ರಸ್ಟಿ ಪ್ರಿಯಾಂಕಾ ಎನ್. ಶೆಟ್ಟಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ 9ನೇ ರ್‍ಯಾಂಕ್ ಗಳಿಸಿದ ಕೃತಿಕಾ ಆರ್. ಸಬಾನವರ್ ಅವರನ್ನು ಅತಿಥಿಗಳು ಸಮ್ಮಾನಿಸಿದರು.
ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಉಪ ಪ್ರಾಂಶುಪಾಲೆ ಡಾ| ನೇತ್ರಾವತಿ ಪಿ.ಎಸ್. ಸ್ವಾಗತಿಸಿದರು. ಡಾ| ಸಿಂಡ್ರೆಲ್ಲ ನಿಶ್ಮಿತಾ ಗೋನ್ಸಾಲ್ವಿಸ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಮತ್ತು ನಿರ್ದೇಶಕ ಡಾ| ಕೆ.ಇ. ಪ್ರಕಾಶ್ ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಪದವಿ ಪ್ರದಾನ ಸಮಾರಂಭದ ಸಂಚಾಲಕಿ ಪ್ರೊ| ನಿಶಾ ಕುಟಿನ್ಹೊ ಪ್ರೊ| ನಿಶಾ ಕುಟಿನ್ಹೊ ವಂದಿಸಿದರು.