ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ ನೀಲಾವರ ಗ್ರಾಮದಲ್ಲಿ ನಿರ್ಮಾಣಗೊಳ್ಳುವ ಸ್ಮತಿವನದ ಭೂಮಿಪೂಜೆ ಮೇ 7ರ ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಮಠದ ದಿವಾನ ಎಂ. ರಘುರಾಮಾಚಾರ್ಯ ಬುಧವಾರ ತಿಳಿಸಿದರು.
ಸ್ಮತಿ ವನ ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ. ಜಿಲ್ಲೆಯ ಪ್ರವಾಸೋ ದ್ಯಮದ ನೆಲೆಯಲ್ಲೂ ಸರಕಾರದಿಂದ ಮಹತ್ವದ ಕೊಡುಗೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಉಮೇಶ್ ವಿ. ಕತ್ತಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ ಗೋಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಬಿ.ಎಸ್.ವೈ. ಸಿಎಂ ಆಗಿದ್ದಾಗ ಶ್ರೀವಿಶ್ವೇಶತೀರ್ಥರು ಮತ್ತು ತುಮಕೂರಿನ ಡಾ| ಸಿದ್ಧಗಂಗಾ ಸ್ವಾಮೀಜಿ ಅವರ ಹೆಸರಿನಲ್ಲಿ ಸ್ಮತಿ ವನ ನಿರ್ಮಾಣಕ್ಕಾಗಿ ತಲಾ 2 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಉಮೇಶ್ ಕತ್ತಿ, ಶಾಸಕ ರಘುಪತಿ ಭಟ್ ಅವರ ವಿಶೇಷ ಸಹಕಾರದಲ್ಲಿ ಈ ಮಹತ್ವದ ಯೋಜನೆ ಅರಣ್ಯ ಇಲಾಖೆ ಮೂಲಕ ಅನುಷ್ಠಾನವಾಗುತ್ತಿದೆ. ನೀಲಾವರ ಗೋಶಾಲೆ ಹತ್ತಿರದಲ್ಲಿ ಎರಡು ಎಕ್ರೆ ಸರಕಾರಿ ಭೂಮಿ ಸಿಕ್ಕಿರುವುದು ನಿರ್ವಹಣೆಯ ದೃಷ್ಟಿಯಿಂದಲೂ ಅನುಕೂಲಕರ ಎಂದರು.
ಸ್ಮತಿವನದ ವಿಶೇಷ
ನೀಲನಕಾಶೆ ಸಿದ್ಧವಾಗಿದ್ದು, ಸುಂದರ ಮುಖದ್ವಾರ, ಮಧ್ಯಭಾಗದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತದೆ. ಪ್ರೇಕ್ಷಕರಿಗೆ ಮೆಟ್ಟಿಲು ಮಾದರಿಯ ಆಸನಗಳು, ಔಷಧ ವನ, ಕುಟೀರಗಳು ನಿರ್ಮಾಣಗೊಳಲ್ಲಿವೆ ಎಂದರು. ಸುಬ್ರಹ್ಮಣ್ಯ ಭಟ್ ಸಗ್ರಿ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ನೀಲಾವರ ಗ್ರಾ.ಪಂ. ಅಧ್ಯಕ್ಷ ಮಹೇಂದ್ರ ಕುಮಾರ್, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.